ವಿದ್ಯುತ್ ತಂತಿ ಭಯದಲ್ಲಿ ನಿವಾಸಿಗಳು : ಹೆಸ್ಕಾಂ ಹಾಗೂ ಗ್ರಾ.ಪಂ ಅಧಿಕಾರಿಗಳಿಗೆ ಚಲ್ಲಾಟ ಜನರಿಗೆ ಪ್ರಾಣ ಸಂಕಟ

ಕ್ರಾಂತಿ ವಾಣಿ ವಿಶೇಷ

ವರದಿ : ಶ್ರೀಕಾಂತ ಘೋರ್ಪಡೆ/ಸಿಕಂದರ ಎಂ.‌ಆರಿ

ಗದಗ/ಗಜೇಂದ್ರಗಡ : ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯವರು ನಾನಾ ವರ್ಷಗಳ ಹಿಂದೆ ಅಳವಡಿಸಿರುವ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳು ಸಾರ್ವನಿಕರಿಗೆಕಿರಿಕಿರಿ ಉಂಟು ಮಾಡುತ್ತಿವೆ. ಮಳೆ, ಬಿರುಗಾಳಿಗೆ ತಂತಿಗಳು ಜೋತು ಬಿದಿದ್ದು, ಮನೆಗಳ ಮೇಲೆ ಕೈಗೆ ನಿಲುಕುವಂತೆ ಹಾದು ಹೋಗಿರುವುದರಿಂದ ಜನತೆ ಭಯದ ನೆರಳಲ್ಲಿ ಬದುಕುವಂತಾಗಿದೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಂಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವೀರಾಪೂರ ಗ್ರಾಮ ಸೇರಿದಂತೆ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಎದುರಿಸುವಂತಾಗಿದೆ. ಸದ್ಯ ಮಳೆಗಾಲ ಪ್ರಾರಂಭವಾಗಿದ್ದು, ಗಾಳಿ, ಮಳೆ ಮತ್ತು ಸಿಡಿಲು, ಮಿಂಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ, ಹೆಸ್ಕಾಂ ಹಾಗೂ ಗ್ರಾಪ ಪಂಚಾಯಿತಿ ಅಧಿಕಾರಿಗಳಿ ಚೆಲ್ಲಾಟ ಸಾರ್ವಜನಿಕರಿಗೆ ಪ್ರಾಣ ಸಂಕಟ ಎನ್ನುವ ಸ್ಥಿತಿಗೆ ತಲುಪಿದೆ.‌

ಹೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಇಲಾಖೆ ಅಧಿಕಾರಿಗಳಿಗೆ ವೀರಾಪೂರ ಗ್ರಾಮಸ್ಥರು ಈಗಾಗಲೇ ಹತ್ತು ಹಲವಾರು ಬಾರಿ ಲಿಖಿತವಾಗಿ ಮತ್ತು ಮೌಖಿಕವಾಗಿ‌ ಮನವಿಗಳನ್ನು ಸಲ್ಲಿಸಿ, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು, ಇಂದಿಗೂ ಯಾವುದೇ ಸಕರಾತ್ಮಕ ಕಾರ್ಯಕೈಗೊಳ್ಳದೇ ಸಾರ್ವಜನಿಕರ ಮುಗ್ಧ ಜೀವಗಳೊಂದಿಗೆ ಆಟ ಆಡುತ್ತಿದ್ದಾರೆ.

ಈ ಗ್ರಾಮದಲ್ಲಿ ಕನಿಷ್ಠ ೧೦೦ಕ್ಕೂ ಅಧಿಕ ಮನೆಗಳಿದ್ದು. ಬಹುತೇಕ ಮನೆಗಳ ಮೇಲೆ ಹೆಸ್ಕಾಂ ಇಲಾಖೆಯ ವಿದ್ಯುತ್ ಲೈನ್ (ತಂತಿ) ವೈರ್‌ ಹಾದು ಹೋಗಿದೆ. ಆಕಸ್ಮಿಕವಾಗಿ ಈ ತಂತಿಗಳು ತುಂಡರಿಸಿ ಬಿದ್ದರೆ ಅನಾಹುತ ತಪ್ಪಿದ್ದಲ್ಲ. ತಲೆ ಮೇಲೆ ಕತ್ತಿ ತೂಗುತ್ತಿರುವ ಸ್ಥಿತಿ ಇಲ್ಲಿನ ನಿವಾಸಿಗಳದ್ದು. ಎಂದಾದರೂ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕು ಎಂದರೇ ತುರ್ತಾಗಿ ಮನೆ ಮೇಲೆ ಹಾದು ಹೋಗಿ­ರುವ ತಂತಿ ಮಾರ್ಗವನ್ನು ಬದಲಿ­­ಸಬೇಕು ಎನ್ನುತ್ತಾರೆ ಗ್ರಾಮದ ನಿವಾಸಿಗಳು.

ಗ್ರಾಮದ ನಾನಾ ಮನೆಗಳ ಮೇಲೆ ಜೋತು ಬಿದ್ದ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಬಲಿ ತೆಗೆದುಕೊಳ್ಳವ ಮುನ್ನವೇ ಹೆಸ್ಕಾಂ ಅಧಿಕಾರಿಗಳು ಜಾಗೃತರಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಹೆಸ್ಕಾಂ ಅಧಿಕಾರಿಗಳೇ ಜವಾಬ್ದಾರರು ಎಂದು ಗ್ರಾಮಸ್ಥರು ದೂರಿದ್ದಾರೆ.

ನಿತ್ಯ ಮಕ್ಕಳನ್ನು ಮನೆ ಮೇಲೆ ಬಿಡದಂತೆ ಎಚ್ಚರ ವಹಿಸುವ ಸ್ಥಿತಿ ಪಾಲಕರದ್ದಾಗಿದೆ. ಒಂದಿಲ್ಲೊಂದು ಕೆಲಸಕ್ಕೆ ಮನೆ ಮೇಲೆ ಹೋಗುವ ಮಹಿಳೆಯರು ವಿದ್ಯತ್ ತಂತಿ ತಾಗುವ ಭಯದಿಂದಲೇ ಕೆಲಸ ಮಾಡಬೇಕಿರುವ ಅನಿವಾರ್ಯತೆ ಎದುರಾಗಿದೆ.

ಅಲ್ಲದೆ ಜೋತು ಬಿದ್ದ ವಿದ್ಯುತ್ ತಂತಿಗಳ ಘರ್ಷಣೆಯಿಂದ ನಾನಾ ಅವಘಡಗಳು ಈಗಾಗಲೇ ಸಂಭವಿಸಿದ್ದು, ಕೆಲವಡೆ ವಿದ್ಯುತ್ ತಂತಿಗಳ ನಡುವೆ ಕಟ್ಟಿಗೆಗಳನ್ನು ಕಟ್ಟಲಾಗಿದೆ. ಅಧಿಕಾರಿಗಳು ಕೂಡಲೇ ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಿಸಿ ಜೋತು ಬೀಳದಂತೆ ಹೊಸ ತಂತಿಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ರಾಂಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವೀರಾಪೂರ ಗ್ರಾಮದ ಶ್ರೀ ದ್ಯಾಮಾಂಭಿಕಾ ದೇವಸ್ಥಾನಸ ಆವರಣದ ಮುಂಬಾಗದಲ್ಲಿರುವ ದೊಡ್ಡ ಬೇವಿನ ಪ್ರಾಣ ಅಪಾಯಕ್ಕೆ ಕಾದಿದೆ. ಗ್ರಾಮಸ್ಥರಿಂದ ಈಗಾಗಲೇ ಗ್ರಾಮ ಪಂಚಾಯತಿ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಹತ್ತು ಹಲವಾರು ಬಾರಿ ಲಿಖಿತ ದೂರು ಸಲ್ಲಿಸಲಾಗಿದ್ದು, ಆದರೆ, ಅಧಿಕಾರಿಗಳು ಅರ್ಜಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಹೆಸ್ಕಾಂ ಅಧಿಕಾರಿಗಳ ಉಢಾಫೆ ಉತ್ತರ : ಬೇವಿನ ಮರ ತೆರವು ಮಾಡಿ, ಮನೆಗಳ ಮೇಲ್ಛಾವಣಿಯ ಮೇಲೆ ಜೋತು ಬಿದ್ದ ತಂತಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುವಂತೆ ಕೋರಿಕೊಂಡರು ಹೆಸ್ಕಾಂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಸಾರ್ವಜನಿಕರಿಗೆ ಉಢಾಪೆ ಉತ್ತರ ನೀಡುತ್ತಿದ್ದಾರೆ.

ಕೈಗೆ ಸಿಗದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ : ಗ್ರಾಮದ ಮದ್ಯದಲ್ಲಿರುವ ಬೇವಿನ ಮರ ತೆರವು ಮಾಡಿ, ವಿದ್ಯುತ್ ತಂತಿಗಳಿಂದ ರಕ್ಷಣೆ ಮಾಡಲು ಮುಂದಾಗಬೇಕಿದ್ದ, ಗ್ರಾ.ಪಂ ಪಿಡಿಒ ಬಿ.ಎನ್. ಇಟಗಿಮಠ ಮಾಯಾವಾಗಿದ್ದಾರೆ. ಸಾರ್ವಜನಿಕರು ನಿತ್ಯ ಈ ಕುರಿತು ಮಾಹಿತಿ ನೀಡಲು ಪೋನ್ ಮಾಡಿದ್ರು ಇವತ್ತು ನಾಳೆ ಬರುತ್ತೇನೆ ಎಂದು ಉಢಾಪೆ ಉತ್ತರ ನೀಡಿ ಜನರಿಗೆ ಸುಳ್ಳು ಹೇಳುತ್ತಾ ಕಾಲ ಹರಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುವಾಗಿದೆ.

ಗ್ರಾಮಸ್ಥರ ಪ್ರಾಣಗಳ ಜೊತೆಗೆ ಆಟ ಆಡುತ್ತಿರುವ ಹೆಸ್ಕಾಂ ಶಾಖಾಧಿಕಾರಿ ಶರಣಪ್ಪ ಮಹಾಮನಿ ಹಾಗೂ ಪಿಡಿಒ ಬಿ.ಎನ್.‌ಇಟಗಿಮಠ ಇವರನ್ನು‌ ಸಸ್ಪೆಂಡ ಮಾಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ