ಸಮಾಜಕ್ಕೆ ಹಿರಿಯರ ಕೊಡುಗೆ ಅಪಾರವಿದೆ-ಮಹೇಶ ಮಾಶಾಳ

ಕ್ರಾಂತಿ ವಾಣಿ ವಾರ್ತೆ
ವರದಿ : ಎಸ್.ಎಂ. ಆರಿ
ಗದಗ: ಈ ಸಮಾಜಕ್ಕೆ ಹಿರಿಯರ ಕೊಡುಗೆ ಅಪಾರವಿದೆ. ನಿವೃತ್ತರಿಂದ ಸಮಾಜಕ್ಕೆ ಇನ್ನೂ ದೊಡ್ಡ ಕೊಡುಗೆ ಬರಬೇಕಿದೆ. ಈ ದಿಶೆಯಲ್ಲಿ ಈಗಾಗಲೇನಿವೃತ್ತರಾಗಿರುವವರು, ಹಿರಿಯ ನಾಗರಿಕರು ಯೋಚಿಸಬೇಕಿದೆ ಎಂದು ಶಿಕ್ಷಣ ತಜ್ಞ ಮಹೇಶ ಮಾಶಾಳ ಹೇಳಿದರು.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ  ಶ್ರೀ ಅನ್ನದಾನೇಶ್ವರ ಸಭಾಂಗಣದಲ್ಲಿ ಅಕ್ಷರ ಭಾರತ ಪ್ರತಿಷ್ಠಾನ ಗದಗ ಹಾಗೂ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಸಹಯೋಗದಲ್ಲಿ ನಡೆದಿರುವ ಶೈಕ್ಷಣಿಕ ಪುನಃಶ್ಚೇತನ ಕಾರ್ಯಕ್ರಮದ ಎರಡನೆ ದಿನದ ಭವಿಷ್ಯದ ಶಿಕ್ಷಕ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಹಳಷ್ಟು ಜನ ಸೇವೆಗೆ ಸೇರಿದ ಕೆಲವೇ ವರ್ಷಗಳಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿ ವೃತ್ತಿಯಲ್ಲಿ ಆಸಕ್ತಿಯನ್ನೇ ಕಳೆದುಕೊಂಡು ಬಿಡುತ್ತಾರೆ. ನಿವೃತ್ತಿ ಅದು ವಯೋ ಸಹಜವಾಗಿ ಎಂದಾದರೂ ಬರುವುದೇ. ಅದರ ಬಗ್ಗೆ ಯೋಚಿಸಿ ನಿಮ್ಮ ಮುಂದಿರುವ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ನಿಮಗಾವ ಹಕ್ಕೂ ಇಲ್ಲ. ಆದ್ದರಿಂದ ನಿಮ್ಮ ವೃತ್ತಿ ಜೀವನದ ಅವಧಿ ಇರುವವರೆಗೂ ಪ್ರಾಮಾಣಿಕತೆಯಿಂದ, ದಿಟ್ಟರಾಗಿ ನಿಮ್ಮ ಸೇವೆಯನ್ನು ಸಲ್ಲಿಸಿ ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಕ್ಕೆ ಸಹಕಾರ ನೀಡಲು ಮುಂದಾಗಬೇಕು. ಪ್ರತಿ ಶಿಕ್ಷಕನೂ ವರ್ಗ ಕೋಣೆಗೆ ಹೋಗುವ ಮುಂಚೆ ತನ್ನ  ಪಾಠದ ಟಿಪ್ಪಣೆಯನ್ನು ಸಿದ್ಧಪಡಿಸಿಕೊಂಡೆ ಹೋಗಬೇಕು. ಹೀಗೆ ಟಿಪ್ಪಣೆ ಸಿದ್ಧಪಡಿಸುವಾಗ ಇಂದಿನ ತಾಂತ್ರಿಕತೆಯ ಅನುಭವವನ್ನೂ ಅದಕ್ಕೆ ಬೆನ್ನೆಲುಬಾಗಿ ಬಳಸಿರಬೇಕು. ಯಾವುದೇ ವಿದ್ಯಾರ್ಥಿ ಏನೇ ಪ್ರಶ್ನೆ ಕೇಳಿದರೂ ಅದಕ್ಕೆ ಸಮರ್ಪಕವಾಗಿ ಉತ್ತರಿಸಬಲ್ಲೆ ಎಂಬ ವಿಶ್ವಾಸ ನಿಮ್ಮಲ್ಲಿಟ್ಟುಕೊಂಡೆ ನೀವು ವರ್ಗಕೋಣೆ ಪ್ರವೇಶಿಸಬೇಕು. ಈಗಾಗಲೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾದವರೂ ಸಹ ಇಂದಿನ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಮಕ್ಕಳಿಗೂ ಮಾರ್ಗದರ್ಶನ ಮಾಡಿ ದೇಶದ ಭವಿಷ್ಯಕ್ಕೆ ಕಾರಣರಾಗಬೇಕು. ನಮ್ಮದೇನಿದೆ? ಎಲ್ಲವೂ ನಿಮ್ಮದೆ ಎನ್ನುವ ಉದಾಸೀನ ಮನೋಭಾವನೆಯನ್ನು ನಿವೃತ್ತರು ಎಂದಿಗೂ ಪ್ರದರ್ಶಿಸಬಾರದು ಎಂದರು.

ಇಂದಿನ ವಿದ್ಯಾರ್ಥಿಗಳು ಬಹಳಷ್ಟು ತೊಂದರೆ ಮತ್ತು ಗೊಂದಲದಲ್ಲಿದ್ದಾರೆ. ಅವರ ಈ ತೊಂದರೆ ಮತ್ತು ಗೊಂದಲಗಳನ್ನು ನಿವಾರಿಸಿ ಅವರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುವ ಶಿಕ್ಷಕರಾಗಬೇಕು. ಅಂದಾಗ ಮಾತ್ರ ನಿಮ್ಮ ಶಿಕ್ಷಕ ವೃತ್ತಿಗೊಂದು ಘನತೆ, ಗೌರವ ಬರುತ್ತದೆ. ನನ್ನದು ಕಲಿಸುವುದಷ್ಟೆ ಕೆಲಸ. ಆತ ಕಲಿತರೆಷ್ಟು ಬಿಟ್ಟರೆಷ್ಟು ಮನೋಭಾವನೆಯನ್ನು ಬೆಳೆಸಿಕೊಂಡವನೆAದಿಗೂ ಉತ್ತಮ ಶಿಕ್ಷಕನಾಗಲಾರ. ಅಂತಹ ಮನೋಭಾವನೆಯನ್ನು ಬಿಟ್ಟು ವರ್ಗಕೋಣೆಯಲ್ಲಿ ಮಕ್ಕಳೆಲ್ಲರೂ ನನ್ನವರೆ ಎಲ್ಲರೂ ಚೆನ್ನಾಗಿ ಕಲಿಯಬೇಕೆನ್ನುವ ಮನೋಭಾವನೆಯೊಂದಿಗೆ ನೀವು ಕೆಲಸ ಮಾಡಿದರೆ ಖಂಡಿತ ನಿಮ್ಮ ಕಾರ್ಯ ಯಶಸ್ವಿಯಾಗುತ್ತದೆ ಎಂದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಮಾಶಾಳ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್. ಆರ್. ಗೌಡರ, ಕಾಲೇಜು ಆಡಳಿತ ಮಂಡಳಿ ಚೇರಮನ್ ಬಸವರಾಜ ವೀರಾಪೂರ, ಪ್ರಾಚಾರ್ಯ ಎಸ್. ಜಿ. ಕೇಶಣ್ಣವರ, ಪಿಯು ಪ್ರಾಚಾರ್ಯ ವೈ. ಸಿ. ಪಾಟೀಲ, ಪ್ರಾಚಾರ್ಯೆ ಅನಸೂಯಾ ಪಾಟೀಲ ಇನ್ನೂ ಮುಂತಾದವರಿದ್ದರು
.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ