ಕ್ರಾಂತಿ ವಾಣಿ ವಾರ್ತೆ
ವರದಿ : ಸಿಕಂದರ ಎಂ. ಆರಿ.
ಗದಗ : ಜಿಲ್ಲೆಯಲ್ಲಿ ಒಂದೆಡೆ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ತತ್ತರಿಸುತ್ತಿದ್ದರೆ, ಇನ್ನೊಂದೆಡೆ ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಇವೆರಡರ ಮಧ್ಯೆ ಮಳೆ, ಪ್ರಕೃತಿ ಸಮತೋಲನ ಕಾಪಾಡುವುದಕ್ಕೆ ಇದ್ದ ಬೃಹತ್ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಮಾರಣ ಹೋಮ ನಿರಂತರ ನಡೆಯುತ್ತಿದೆ.
ಹಸಿರೇ ಉಸಿರು ಹಸಿರಿನಿಂದಲೇ ನಮ್ಮ ಬದುಕು. ಸುತ್ತಮುತ್ತ ಹಸಿರಿದ್ದರೆ ಮಾತ್ರ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಆದರೆ, ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶೀಲ್ದಾರ ಕಛೇರಿ ಆವಣರದಲ್ಲಿ ಸುಮಾರು 65-70 ವರ್ಷಗಳ ೨ ಹುಣಸೆ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಯಲಾಗಿದೆ. ಲಕ್ಷಾಂತರ ರೂ. ಮೌಲ್ಯದ ಮರಗಳನ್ನು ಗದಗ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಸಹಾಯಕ ಅರಣ್ಯಾಧಿಕಾರಿ ಕಚೇರಿಗೆ ಟೆಂಡರ್‌ದಾರರು ಕೇವಲ ಅಂದಾಜು ೮ ಸಾವಿರ ರೂ. ನೀಡಿ, ಬುಡ ಸಮೇತ ಕಡಿದುಕೊಂಡು ಹೋದರು. ಹುಣಸೆ ಮರಗಳು ಮರಕಟುಕರ ಪಾಲಾಗಿದೆ.
ಸುಮಾರು ೬೫-೭೦ ವರ್ಷಗಳಿಂದ ಸಾವಿರಾರು ಪಕ್ಷಿಗಳಿಗೆ ಹಾಗೂ ತಹಶೀಲ್ದಾರರ ಕಛೇರಿಗೆ ತಮ್ಮ ಕೆಲಸ ಕಾರ್ಯಗಳಿಗೆ ನಿತ್ಯ ಬರುವ ಸಾರ್ವಜನಿಕರಿಗೆ ಮತ್ತು ರೈತರಿಗೆ ಆಶ್ರಯ ನೀಡುತ್ತಿದ್ದ ಮರಗಳು ಕೊಡಲಿ ಏಟಿಗೆ ಬಲಿಯಾಗಿದ್ದರಿಂದ ಪಕ್ಷಿಗಳು ಮತ್ತು ಜನರು ಬಿಸಿಲಿನ ತಾಪಕ್ಕೆ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.
ಮರಗಿಡಗಳನ್ನು ನಾಶಪಡಿಸುವುದಕ್ಕೆ ತೋರುವ ಆಸಕ್ತಿ ಬೆಳೆಸಲು ಯಾಕೆ ತೋರುತ್ತಿಲ್ಲ? ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಭಾರಿ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಪ್ರಜ್ಞಾವಂತರ ಎಚ್ಚರಿಕೆ ಮಾತು.
ಸರ್ಕಾರಗಳು ಹಾಗೂ ಜನ ಪ್ರತಿನಿಧಿಗಳು ಕಾಡನ್ನು ಉಳಿಸಿ ಕಾಡನ್ನು ಬೆಳೆಸಿಯೆಂಬ ಬೊಬ್ಬೆ ಹೊಡೆಯುತ್ತಾರೆ ಹೊರೆತು ಇದರ ಬಗ್ಗೆ ಯಾರೊಬ್ಬರು ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಪರಿಸರ ಪ್ರೇಮಿಗಳ ಆಕ್ರೋಶವಾಗಿದೆ.
ಪರಿಸರವು ಸಂರಕ್ಷಣೆ ಮಾಡುವುದು ನಮ್ಮ ಹಕ್ಕೆಂದು ಸರ್ಕಾರವು ವರ್ಷಕ್ಕೆ ಕೋಟ್ಯಾಂತರ ರೂ ಗಳು ವೆಚ್ಚ ಮಾಡಿ ಜಾಹೀರಾತು ಮೂಡಿಸುತ್ತದೆ ಅದು ಕೇವಲ ಪರಿಸರ ದಿನಾಚರಣಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಸರಕಾರ ”ಗಿಡ ನೆಡಿ-ಪರಿಸರ ಉಳಿಸಿ”, ಪರಿಸರವಿದ್ದರೆ ನಾಡಿಗೆ ಮಳೆ, ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿಡ-ಮರಗಳನ್ನು ಪರೋಕ್ಷ ವಾಗಿ ಕಡಿಸುತ್ತಿದೆ. ರಸ್ತೆಯ ಪಕ್ಕದಲ್ಲಿ ಆರೋಗ್ಯಕರವಾಗಿ ಬೆಳೆದು ನಿಂತಿದ್ದ ಹುಣಸೇ ಮರವೊಂದು ಗರಗಸಕ್ಕೆ ಆಹುತಿಯಾಗಿ ಧರೆಗುರುಳಿದ್ದು ಪರಿಸರ ಪ್ರೇಮಿಗಳಿಗೆ ಕಣ್ಣಿರು ತರಿಸುವ ಕ್ಷಣಕ್ಕೆ ಸಾಕ್ಷಿಯಾಯಿತು. ಸಾಲು ಸಾಲು ಮರಗಳು ಹೀಗೆ ಧರೆಗುಳಿದರೆ ಮಳೆ ಬರುವುದಾದರೂ ಹೇಗೆ? ಇದನ್ನು ಕಡಿತಲೆ ಮಾಡುವವರು ಮತ್ತು ಮಾಡಿಸುವವರು ಯೋಚಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ಮರಗಳನ್ನು ಕಡಿದ ಜಾಗದಲ್ಲಿ ಗಿಡಗಳನ್ನು ಬೆಳೆಸಲು ನಾಗರಿಕರು, ಸಂಘ ಸಂಸ್ಥೆಗಳು, ಸಂಬಂಧಿಸಿದ ಇಲಾಖೆ ಮುಂದಾಗಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ನಾನು ಚುನಾವಣಾ ನಿಮಿತ್ತದಿಂದ ಗಜೇಂದ್ರಗಡ ಪುರಸಭೆಗೆ ಬಂದಿರುವೆ. ನಾನು ಇಲ್ಲಿಗೆ ಬರುವ ಮುಂಚಿತವಾಗಿ ಇಂದಿರಾ ಕ್ಯಾಂಟಿನ ನಿರ್ಮಾಣ ಮಾಡಲು ಪ್ರಸ್ತಾಪನೆಯನ್ನು ಕಳುಹಿಸಿದ್ದು ಇದೆ. ಇಂದಿರಾ ಕ್ಯಾಂಟಿಮ್ ನಿರ್ಮಾಣದ ಉದ್ದೇಶ ಜನ ಬೀಡು ಪ್ರದೇಶದಲ್ಲಿ ಸ್ಥಾಪನೆ ಮಾಡಬೇಕೆಂದು ಇದೆ. ಏಕೆಂದರೆ, ಬಡವರಿಗೆ ಮತ್ತು ಹಸಿದವರಿಗೆ ಅನ್ನ ಹಾಕುವ ಯೋಜನೆ ಹೊಂದಿದೆ. ನಾನು ಕೂಡ ಗಜೇಂದ್ರಗಡ ನಗರದಲ್ಲಿ ಹೆಚ್ಚು ಜನ ಬೀಡು ಪ್ರದೇಶದಲ್ಲಿರುವ ಸಿಎ ಸೆಟ್ ಬಗ್ಗೆ ಮಾಹಿತಿ ಪಡೆದುಕೊಂಡಿರುವೆ. ಆದರೆ, ಯಾವುದೇ ಸಿಎ ಸೆಟ್ ದೊರೆಯದ ಕಾರಣ ತಾಲೂಕಾ ಕಛೇರಿಯಲ್ಲಿ ೬೦*೫೦ ಅಡಿಯಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲು ನನಗೆ ನಮ್ಮ ಡಿಎಂ ಕಛೇರಿಯಿಂದ ಆದೇಶ ಬಂದಿದೆ. ಈ ಎರಡು ದೊಡ್ಡ ಹುಣಸೆ ಮರಗಳನ್ನು ಕಡಿಯಲು ಮನಸ್ಸು ಇರಲಿಲ್ಲ. ಆದರೆ, ಅನಿವಾರ್ಯ ಕಾರಣದಿಂದ ಮರಗಳನ್ನು ಕಡಿಯಲಾಗುತ್ತಿದೆ. ಮುಂಬರುವ ಮಳೆಗಾಲದಲ್ಲಿ ಸ್ಥಳಗಳ ಸಿಕ್ಕಲ್ಲಿ ಇನ್ನೂ ಹೆಚ್ಚಿನ ಗಿಡ, ಮರಗಳನ್ನು ಬೆಳಸಲು ನಮ್ಮ ಪುರಸಭೆ ವತಿಯಿಂದ ಸಹಕಾರ ನೀಡಿ ಪರಿಸರ, ಅರಣ್ಯ ಬೆಳೆಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಕಲ್ಲನಗೌಡ ಬಿರಾದಾರ ತಿಳಿಸಿದ್ದಾರೆ.