ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ:
ಪ್ರಸ್ತುತ ಮುಂಗಾರು ಮಳೆ ಆರಂಭವಾಗಿದ್ದು, ಬಿತ್ತನೆ ಕಾರ್ಯಕ್ಕೆ ಅನ್ನದಾತರು ಮುಂದಾಗಿದ್ದರೆ ಇತ್ತ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟ ಮಾಡುವ ಅಂಗಡಿ ಮಾಲೀಕರು ಗೊಬ್ಬರ ಮತ್ತು ಬೀಜಗಳ ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಲಾಭ ಪಡೆಯುತ್ತಿರುವವರ ಎಡೆಮುರಿ ಕಟ್ಟಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೃಷಿ ಇಲಾಖೆಯೂ ನಾಟಕೀಯವಾಗಿ ಗೊಬ್ಬರದ ಅಂಗಡಿಗಳಿಗೆ ಭೇಟಿ ಹೊರಟು ಹೋಗುತ್ತಿದೆ. ಎಷ್ಟು ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಲಿ. ಅಂಗಡಿಗಳ ಮಾಲೀಕರು ಗೋಡೌನ್‌ಗಳಲ್ಲಿ ಬೀಜ-ಗೊಬ್ಬರ ದಾಸ್ತಾನು ಇಟ್ಟಿದ್ದಾರೆ. ರೈತರು ಕೇಳಿದರೆ ಮಾಲು ಬಂದಿಲ್ಲ ಎನ್ನುತ್ತಾರೆ. ಅವಶ್ಯಕತೆ ಇರುವ ರೈತರು ಎಷ್ಟಾದರು ಆಗಲಿ ಬೀಜ, ಗೊಬ್ಬರ ಕೊಡಿ ಎಂದಾಗ ಅತ್ಯಧಿಕ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಯಾವುದೇ ರಶೀದಿಗಳನ್ನು ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃತಕ ಅಭಾವ ಸೃಷ್ಟಿಸಿ ವ್ಯಾಪಾರಸ್ಥರು ಬೀಜ ಮತ್ತು ರಸಗೊಬ್ಬರಗಳ ಬೆಲೆಯನ್ನು ಮೂರುಪಟ್ಟು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲದಂತಾಗಿದೆ. ಇದನ್ನು ತಡೆಯದಿದ್ದರೆ ರೈತ ಸಂಘದಿAದ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.