ಉಪಲೋಕಾಯುಕ್ತರಿಂದ ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ
ಇಲಾಖಾಧಿಕಾರಿಗಳು ದೈನಂದಿನ ಕರ್ತವ್ಯದಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ
ಕ್ರಾಂತಿ ವಾಣಿ ವಾರ್ತೆ
ಗದಗ : ಇಲಾಖೆಯ ಅಧಿಕಾರಿಗಳು ಜನಸಾಮಾನ್ಯರಿಗೆ ವಿವಿಧ ಸೌಲಭ್ಯಗಳನ್ನು ತಲುಪಿಸುವಲ್ಲಿ ಸಮಯೋಚಿತವಾಗಿ ಪ್ರಾಮಾಣಿಕವಾಗಿ ನಿಷ್ಟೆಯಿಂದ ಕರ್ತವ್ಯ ನಿರ್ವಹಿಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ತಾಳ್ಮೆ ಹಾಗೂ ಸೌಜನ್ಯದಿಂದ ವರ್ತಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ಸಾರ್ವಜನಿಕರಿಂದ ಅಹವಾಲು ಹಾಗೂ ಮನವಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಸಂವಿಧಾನವು ಸಮಪಾಲು ಸಮಬಾಳು ಎನ್ನುವ ಪವಿತ್ರ ಧ್ಯೇಯೋದ್ದೇಶವನ್ನು ಹೊಂದಿದ್ದು ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಯುತ ಜೀವನ ನಡೆಸಲು ಅವರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕಾನೂನುಗಳು ಹಾಗೂ ವಿವಿಧ ಸೌಲಭ್ಯಗಳು ತಾಯಿ ಗರ್ಭದಲ್ಲಿರುವಾಗಲೇ ಆ ಮಗುವಿಗೆ ಪ್ರಾರಂಭವಾಗುತ್ತವೆ. ಸಂವಿಧಾನವು ಪ್ರತಿಯೊಬ್ಬರಿಗೂ ಹಕ್ಕು ಮತ್ತು ಬಾಧ್ಯತೆಗಳನ್ನು ಕೊಟ್ಟಿದ್ದು ಅವುಗಳು ಸದುಪಯೋಗ ವಾಗಬೇಕು. ನಮಗೆ ದೇಶ ಏನು ಕೊಟ್ಟಿದೆ ಎನ್ನುವುದರ ಬದಲು ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಎಂದು ಪ್ರತಿಯೊಬ್ಬರೂ ತಮ್ಮಷ್ಟಕ್ಕೆ ತಾವೇ ಅರ್ಥೈಸಿ ಕೊಳ್ಳಬೇಕಾಗಿದೆ ಎಂದರು.
ಯಾವುದೇ ಆಮಿಷಕ್ಕೆ ಒಳಗಾಗದೇ ಸಂದರ್ಭಾನುಸಾರ ಕಾನೂನು ನಿಯಮಾವಳಿಗಳ ಪ್ರಕಾರ ಭ್ರಷ್ಟಾಚಾರರಹಿತ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ನೌಕರನ ಕರ್ತವ್ಯ. ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಬಂದ ಹಣವನ್ನು ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತದೆ. ಆಸ್ಪತ್ರೆಗಳ ನಿರ್ಮಾಣ, ರಸ್ತೆ, ಶಿಕ್ಷಣ, ಹೀಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಇಲಾಖಾಧಿಕಾರಿಗಳು ವಿನಾಕಾರಣ ವಿಳಂಬ ನೀತಿ ಅನುಸರಿಸಬಾರದು. ಸಾರ್ವಜನಿಕ ನೌಕರರ ಕರ್ತವ್ಯ/ ದುರ್ನಡತೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಮತ್ತು ವರದಿಮಾಡಲು ಸ್ಥಾಪಿಸಿರುವ ಸಂಸ್ಥೆಯೇ ಕರ್ನಾಟಕ ಲೋಕಾಯುಕ ಸಂಸ್ಥೆಯಾಗಿದೆ ಎಂದು ಹೇಳಿದರು.
ವಿನಾಕಾರಣ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವಲ್ಲಿ ವಿಳಂಬ ಮಾಡುವುದು ಹಾಗೂ ಕರ್ತವ್ಯ ಲೋಪ ಎಸಗುವುದನ್ನು ಹಾಗೂ ಸಾರ್ವಜನಿಕರಿಂದ ಬಂದ ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕ ಆಡಳಿತದ ಗುಣಮಟ್ಟ ಸುಧಾರಿಸುವುದು , ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ / ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವುದು ಲೋಕಾಯುಕ್ತ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ ಎಂದ ಅವರು, ಕಾಮಗಾರಿಗಳ ಅನುಷ್ಟಾನದಲ್ಲಿ ಕರ್ತವ್ಯ ಲೋಪವಾದಾಗ ಅಂತಹ ಸಮಸ್ಯೆಗಳಿಗೆ ಸಾರ್ವಜನಿಕರ ಹಿತಾಸಕ್ತಿಗಾಗಿ ಮಾಧ್ಯಮದ ಮುಖಾಂತರ ಪರಿಹಾರ ಕಂಡುಕೊಂಡಿರುವದು ಸಹ ಸಂತಸದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಕ್ಕುಗಳ ಸಂರಕ್ಷಣೆ ಹಾಗೂ ಯೋಜನೆಗಳ ಸೌಲಭ್ಯಗಳ ಸರ್ವರಿಗೂ ತಲುಪಿಸುವ ಕಾರ್ಯವು ಕಾರ್ಯಾಂಗದ ಹೆಗಲಮೇಲಿದೆ ಎಂದು ಸಲಹೆ ಮಾಡಿದರು.
ದೂರುದಾರರು ಅವರ ಕುಂದುಕೊರತೆ ಹಾಗೂ ಪರಿಹಾರದ ಬಗ್ಗೆ ಸ್ಪಷ್ಟವಾಗಿ ತಿಳಿಸಿ, ಅವರ ಹೆಸರು, ದೂರವಾಣಿ ಸಂಖ್ಯೆ , ಇಮೇಲ್ – ಐ.ಡಿ. ಸಂಪೂರ್ಣ ವಿಳಾಸ ಮತ್ತು ಸಾರ್ವಜನಿಕ / ಸರ್ಕಾರಿ ನೌಕರರ ಹೆಸರು, ವಿಳಾಸ ಹುದೆಯ ವಿವರಗಳನ್ನು ದೂರಿನಲ್ಲಿ ತಿಳಿಸಬೇಕು. ದೂರಿನ ಜೊತೆಗೆ ನಮೂನೆ-1 ಮತ್ತು 2ನ್ನು ಭರ್ತಿಮಾಡಿ ಅಗತ್ಯ ದಾಖಲೆಗಳ ದೃಢೀಕೃತ ಅಥವಾ ಯಥಾ ಪ್ರತಿಗಳೊಂದಿಗೆ ಲೋಕಾಯುಕ್ತ ಸಂಸ್ಥೆಗೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸಭೆಯ ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿ ಮಾತನಾಡಿ, ಸಾರ್ವಜನಿಕರು ಉಪಲೋಕಾಯುಕ್ತರಿಗೆ ತಮ್ಮ ಅಹವಾಲುಗಳನ್ನು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ನೂಕು ನುಗ್ಗಲಾಗದಂತೆ ಒಬ್ಬೊಬ್ಬರಾಗಿ ತಮ್ಮ ಅಹವಾಲುಗಳೊಂದಿಗೆ ಅಗತ್ಯದ ದಾಖಲೆಗಳನ್ನು ಲಗತ್ತಿಸಿ ದೂರು ನೀಡಲು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಸಂಕದ, ಸಂಪನ್ಮೂಲ ವ್ಯಕ್ತಿ ಪ್ರಕಾಶ ನಾಡಗೇರ, ಉಪನಿಬಂಧಕರಾದ ಅಮರನಾರಾಯಣ ಕೆ., ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪಿಎಂ ಪಾಟೀಲ, ಗದಗ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿವೈಎಸ್ಪಿ ವಿಜಯ ಬಿರಾದಾರ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಜಿ.ಎಸ್.ಪಲ್ಲೇದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು. ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಪ್ರಾಚಾರ್ಯ ಬಸವರಾಜ ಗಿರಿತಿಮ್ಮಣ್ಣವರ ಕಾರ್ಯಕ್ರಮ ನಿರ್ವಹಿಸಿದರು.