ವಕೀಲ ವೃತ್ತಿ ವ್ಯವಹಾರವಲ್ಲ, ನೊಂದವರ ಆಶಾಕಿರಣ

ಕ್ರಾಂತಿ ವಾಣಿ ವಾರ್ತೆ
ವರದಿ : ಸಿಕಂದರ ಎಂ.‌ಆರಿ
ಗದಗ : ವಕೀಲ ವೃತ್ತಿ ವ್ಯವಹಾರವಾಗದೇ ನೊಂದವರ ಕಣ್ಣೀರು ಒರೆಸಬೇಕು. ವಕೀಲರು ಸಂವಿಧಾನಕ್ಕೆ ಬದ್ಧರಾಗಿರಬೇಕು. ವೃತ್ತಿ ಗೌರವ ಕಾಪಾಡಿಕೊಳ್ಳಬೇಕು. ವೃತ್ತಿಯನ್ನು ವ್ಯವಹಾರಕ್ಕೆ ಬಳಸದೇ ನೊಂದವರ ಕಣ್ಣೀರು ಒರೆಸಿ ನ್ಯಾಯ ಪರವಾಗಿರಬೇಕು. ಕಾನೂನು ವಿದ್ಯಾರ್ಥಿಗಳು ಮುಖ್ಯವಾಗಿ ಅಧ್ಯಯನಶೀಲರಾಗಬೇಕು ಎಂದು ಸಿಂಡಿಕೇಟ್ ಸದಸ್ಯ, ಹುಬ್ಬಳ್ಳಿಯ ಕೆ.ಎಸ್.ಎಲ್.ಯು ಮತ್ತು ನ್ಯಾಯವಾದಿ ವಸಂತ ಲದ್ವಾ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಕಾಲೇಜು ಒಕ್ಕೂಟ, ಜೀಮಖಾನ, ಎನ್.ಎಸ್.ಎಸ್. ಸಾಂಸ್ಕೃತಿಕ ವಿಭಾಗದ ವತಿಯಿಂದ ಆಯೋಜಿಸಿದ್ದ ಎಲ್.ಎಲ್.ಬಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಲಯ ವ್ಯವಹಾರದ ಅಂಗಡಿ ಎಂಬ ಮನೋಭಾವ ಬೆಳೆಸಿಕೊಳ್ಳದೇ, ನೊಂದು ಬಂದವರಿಗೆ ನ್ಯಾಯದಾನ ಮಾಡುವ ದೇಗುಲವೆನ್ನುವಂತೆ ಕಾಣಬೇಕು. ಜೊತೆಗೆ ವಕೀಲರಾಗುವವರಲ್ಲಿ ಲಾಭಾಂಶದ ಹಂಬಲ ಸಲ್ಲದು. ವಕೀಲರ ಪಾತ್ರವೂ ಕೂಡ ದೇಶದ ಸಮಗ್ರತೆಗೆ ಮಹತ್ವದ ಪಾತ್ರ ವಹಿಸುತ್ತದೆ. ವಕೀಲರು ಸಂವಿಧಾನ ರಕ್ಷಣೆ ಮಾಡುವ ನಿಟ್ಟಿನತ್ತ ಗಮನಹರಿಸಬೇಕು. ವಕೀಲ ಎಂದ ಕೂಡಲೇ ವಿನಾಕಾರಣ ವಾದ ಮಾಡುವವರು, ಅವರಿಗೆ ಮನೆ ಬಾಡಿಗೆ ನೀಡಬಾರದು, ಮಾತನಾಡಿಸಬಾರದು ಎಂದು ಸಮಾಜದ ಒಂದು ಭಾಗ ವಿಚಾರ ಮಾಡುವ ಕಾಲವಿತ್ತು. ಅದರೇ ಅಂತಹ ವಿಚಾರಗಳು ಸಮಾಜದಲ್ಲಿ ಬದಲಾಗಿದೆ‌. ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ವಕೀಲರ ಪಾತ್ರದ ಮಹತ್ವವನ್ನು ಕುರಿತು ಸಮಾಜ ಒಪ್ಪಿಕೊಂಡಿದೆ. ಸಂವಿಧಾನದ ರೂಪುರೇಷ ಉಳಿಸಿಕೊಳ್ಳುವಲ್ಲಿ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಮುಖ್ಯ ಕಾರಣ. ವಕೀಲಿ ವೃತ್ತಿ ಸಂವಿಧಾನದಲ್ಲಿಯೇ ಉಲ್ಲೇಖವಾಗಿರುವ ವೃತ್ತಿ. ಅಂತಹ ವೃತ್ತಿಯ ಬಗ್ಗೆ ಕೀಳರಿಮೆ‌ ಬೇಡ. ಸಾಮಾನ್ಯ ಜನರು ತಡವಾಗಿ ಸಿಗುವ ನ್ಯಾಯದ ಕುರಿತು ಸದಾ ಬೇಸರಿಸುತ್ತಾರೆ. ತಡವಾಗಿ ಸಿಗುವ ನ್ಯಾಯ ನ್ಯಾಯವೇ ಅಲ್ಲ ಎಂಬ ಮಾತಿದೆ. ಆದರೆ ಅವಸರದಲ್ಲಿ ನೀಡಿದ ನ್ಯಾಯ ಸಮಾಧಿ ಮಾಡಿದಂತೆ ಎಂದರು.
ಜೆ.ಟಿ. ಕಾಲೇಜಿನ ಪ್ರಾಚಾರ್ಯ ಪಿ.ಜಿ. ಪಾಟೀಲ ಮಾತನಾಡಿ,  ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕು ಇದೆ. ಶಿಕ್ಷೆ ಮನ ಪರಿವರ್ತನೆಯ ದಾರಿ ಆಗಬೇಕು. ಆದರೆ, ಪ್ರಸ್ತುತ ಜೈಲು ಕೂಡ ವ್ಯಾಪಾರದ ಕೇಂದ್ರವಾಗಿರುವುದು ವಿಷಾದನೀಯ. ಇದು ದೂರವಾಗಬೇಕು. ವಕೀಲರ ವೃತ್ತಿಗೆ ಬರುವವರು ಆತ್ಮಸಾಕ್ಷಿಗೆ ಬದ್ಧರಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಬೇಕು. ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್ ಭಾಷೆ ಕರಗತ ಮಾಡಿಕೊಂಡರೆ ಒಳ್ಳೆಯದು. ವಕೀಲರು ವತ್ತಿಯಲ್ಲಿ ಎಂದಿಗೂ ತಾಳ್ಮೆ ಕಳೆದುಕೊಳ್ಳದೆ ಸದಾ ವತ್ತಿಯಲ್ಲಿ ವಿದ್ಯಾರ್ಥಿಗಳಾಗಿದ್ದೇವೆ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ವಕೀಲರಲ್ಲಿ ಆತ್ಮವಿಶ್ವಾಸ ವದ್ಧಿಯಾಗಬೇಕು. ಹಿರಿಯ ವಕೀಲರು ವತ್ತಿ ಯಲ್ಲಿ ಯುವಕರಿಗೆ ಮಾದರಿಯಾಗಬೇಕು. ಯುವ ವಕೀಲರು ವೃತ್ತಿ ಪ್ರೀತಿಯಿಂದ ಸ್ವೀಕರಿಸಬೇಕು ಎಂದರು.‌
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು. ಲೋಕಲ್ ಬಾಡಿ ಗರ್ವನಿಂಗ್ ಸದಸ್ಯ ಬಿ.ಜಿ. ಶೇಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ಜೆ.ಟಿ.‌ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಚೇರಮನ್ ಎಸ್.ಪಿ. ಸಂಶಿಮಠ,
ವಕೀಲ ಮೋಹನಕುಮಾರ ಭಜಂತ್ರಿ, ಪ್ರಾಚಾರ್ಯರ ಜೈಹನುಮಾನ ಎಚ್.ಕೆ.‌ ದೈಹಿಕ ನಿರ್ದೇಶಕ ಡಾ.ಸಿ.ಬಿ.ರಣಗಟ್ಟಿಮಠ, ಉಪನ್ಯಾಸಕರಾದ ಡಾ.ವಿಜಯ ಮುರದಂಡೆ, ಡಾ. ಶ್ರೀನಿವಾಸ ಪಾಲ್ಕೊಂಡ, ಡಾ.ಜ್ಯೋತಿ ಸಿ.ವಿ., ಎಸ್.ಟಿ.‌ಮೂರಶಿಳ್ಳಿನ, ಶರತ್ ದರಬಾರೆ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
 ವಿದ್ಯಾರ್ಥಿ ಸಂತೋಷ ಭದ್ರಾಪೂರ ನಿರೂಪಿಸಿದರು.
ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ