ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೌರಕಾರ್ಮಿಕರ ಪಾತ್ರ ಅತ್ಯಮೂಲ್ಯ

ಕ್ರಾಂತಿ ವಾಣಿ ವಾರ್ತೆ

ವರದಿ : ನಿಂಗಪ್ಪ ಎನ್. ಚಲವಾದಿ

ನರೇಗಲ್ಲ : ಪೌರ ಕಾರ್ಮಿಕರು ಪಟ್ಟಣದಲ್ಲಿ ಯಾವುದೇ ಸ್ವಚ್ಛತೆ ಕಾರ್ಯದಲ್ಲಿ ಬೇಸರ ಇಲ್ಲದೆ ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿತ್ಯ ಮಾಡುತ್ತಿದ್ದಾರೆ. ನಿಜಕ್ಕೂ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಹೇಳಿದರು.

ಪಟ್ಟಣದ ಪಟ್ಟಣ ಪಂಚಾಯತಿ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ(ರಿ)ಕೇಂದ್ರ ಕಛೇರಿ ಚಿತ್ರದುರ್ಗ ಹಾಗೂ ಶಾಖೆ ನರೇಗಲ್ಲ, ನರೇಗಲ್ಲ ಪಟ್ಟಣ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ೧೩ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳುವುದು ಸೂಕ್ತವಾಗಿದೆ. ಪೌರ ಕಾರ್ಮಿಕರಿಂದ ನಗರ ಸ್ವಚ್ಛತೆಯಿಂದ ಕೂಡಿದ್ದು, ಕಾರ್ಯಕ್ಕೆ ನಾವೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಬೇಕು. ಉತ್ತಮ ವಾತಾವರಣ ಸೃಷ್ಟಿಯಾಗಲು ಅವರ ಪಾತ್ರ ಪ್ರಮುಖವಾಗಿ ಸಹಕಾರಿಯಾಗಿದೆ ಎಂದರು.

ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಪಟ್ಟಣದ ಸ್ವಚ್ಛತೆ, ಜನರ ಆರೋಗ್ಯ ಕಾಪಾಡುವ ಜತೆ ವಿವಿಧ ಓಣಿಗಳ
ಸೌಂದರ್ಯ ಹೆಚ್ಚಿಸುವುದಕ್ಕೆ ನಿತ್ಯ ಪರಿಶ್ರಮ ಪಡುವ ಪೌರ ಕಾರ್ಮಿಕರ ಸೇವೆ ಅಮೂಲ್ಯವಾದದ್ದು. ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆಯ ಜತೆಗೆ ವೈಯಕ್ತಿಕ ಸ್ವಚ್ಛತೆಯ ಕಡೆಗೂ ಆದ್ಯತೆ ನೀಡಬೇಕು. ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರಿ. ಶುದ್ಧವಾದ ನೀರು, ಶುದ್ಧವಾದ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿಯವರ ಮಾತನಾಡಿ, ಸ್ವಚ್ಛ ಸ್ವಭಾವ, ಸ್ವಚ್ಛ ಸಂಸ್ಕಾರ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ವರ್ಗಗಳಲ್ಲಿ ಪೌರ ಕಾರ್ಮಿಕರು ಮೊದಲಿಗರು. ಕಸ ಕಡ್ಡಿ ಚರಂಡಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ, ಗಲೀಜುಗಳನ್ನು ಮುಟ್ಟುವ ಸಂದರ್ಭಗಳಲ್ಲಿ ಕಸ ವಿಲೇವಾರಿ ಮಾಡುವಾಗ ಇಲಾಖೆ ಒದಗಿಸಿದ ಗ್ಲೌಸ್, ಬೂಟು, ಮಾಸ್ಕ್ ಇತರೆ ರಕ್ಷಣಾ ಪರಿಕರಗಳನ್ನು ತಪ್ಪದೇ ಉಪಯೋಗಿಸಬೇಕು. ಇಲ್ಲವಾದಲ್ಲಿ ಬೇಗನೇ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.

ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಸ್ಥಾನಮಾನ ಕಲ್ಪಿಸಲಾಗಿದೆ. ಪೌರ ಕಾರ್ಮಿಕರು ಇದರ ಪೂರ್ಣ ಲಾಭ ಪಡೆದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅಧಿಕಾರಿಗಳನ್ನು ಮಾಡಬೇಕು. ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು. ಪೌರ ಕಾರ್ಮಿಕರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕಾರಣ ಹಲವು ಸಮಸ್ಯೆಗಳಿದ್ದರೂ ತಮ್ಮ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ರಾಜನ ಮಗ ರಾಜ ಆಗುತ್ತಿದ್ದ ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸವಿಂಧಾನ ರಚಿಸಿದಾಗಿನಿಂದ ಬಡವರ ಮಕ್ಕಳು ಇಂದು ಉನ್ನತ ಹುದ್ದೆಗೆ ಏರಲು ಸಾಧ್ಯವಾಗಿದೆ. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸುವ ಮೂಲಕ ಅವರು ಉನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕು. ಅವರು ಇತರೆ ಮಕ್ಕಳಂತೆ ಓದಿ ಸಮಾಜದಲ್ಲಿ ಮುಂದೆ ಬರಬೇಕು ಎಂದರು.

ಪ.ಪಂ ಸದಸ್ಯ ರಾಚಯ್ಯ ಮಾಲಗಿತ್ತಮಠ ಮಾತನಾಡಿ, ತಲೆ ತಲಾಂತರದಿಂದ ಪೌರ ಕಾರ್ಮಿಕರು ಇದೇ ಕೆಲಸ ಮಾಡುತ್ತಿದ್ದಾರೆ. ಮುಂದಿನ ತಲೆಮಾರಾದರೂ ಈ ಕೆಲಸ ಬಿಟ್ಟು ಬೇರೆ ವೃತ್ತಿಗಳತ್ತ ಹೋಗಬೇಕು. ಅದಕ್ಕೆ ಅವರ ಮಕ್ಕಳಿಗೆ ಶಿಕ್ಷಣ ಅನಿವಾರ್ಯವಾಗಿದೆ. ಪೌರಕಾರ್ಮಿಕರ ಸಮಸ್ಯೆಗಳು ಇಂದಿನದಲ್ಲ. ಶತ ಶತಮಾನಗಳಿಂದಲೂ ಇರುವ ಪೌರ ಕಾರ್ಮಿಕರ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಇವತ್ತಿನವರೆಗೂ ಪೌರ ಕಾರ್ಮಿಕರು ಕಸ ಗುಡಿಸುವುದು, ಮಲ-ಮೂತ್ರ ಬಾಚುವುದು ತಪ್ಪಿಲ್ಲ. ಇಂತಹ ಸ್ಥಿತಿಯಲ್ಲಿಯೂ ಎದೆಗುಂದದೇ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವುದು ಅಗತ್ಯವಿದೆ ಎಂದರು.

ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿ, ಪಟ್ಟಣದ ಪ್ರತಿಯೊಂದು ವಾರ್ಡಗಳ ಸಾರ್ವಜನಿಕರು ಆರೋಗ್ಯದಿಂದ ಜೀವನ ಸಾಗಿಸುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣವೇ ನಮ್ಮ ಪೌರ ಕಾರ್ಮಿಕರ ಸೇವೆಯಾಗಿದೆ. ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಒದಗಿಸುವುದರ ಜೊತೆಗೆ‌ ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದರು.

ಪ.ಪಂ ಸದಸ್ಯ‌ ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಜ್ಯೋತಿ ಪಾಯಪ್ಪಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಶಿವಾನಂದ ಗೋಗೆರಿ ಉಪನ್ಯಾಸ ನೀಡಿದರು.

ಈವೇಳೆ ಎಲ್ಲಾ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭವನ್ನು ನೆರವೇರಿಸಲಾಯಿತು. ಪೌರ ಕಾರ್ಮಿಕರ ಮನರಂಜನೆಗಾಗಿ ಸಂಗೀತ ಕಾರ್ಯಕ್ರಮ ಹಾಗುಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ನರೇಗಲ್ಲ ಘಟಕದ ಅಧ್ಯಕ್ಷ ನೀಲಪ್ಪ ಚಳ್ಳಮರದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಂಕ್ರಪ್ಪ ದೊಡ್ಡಣ್ಣವರ, ಪ.ಪಂ ಸದಸ್ಯರಾದ ಮುತ್ತಪ್ಪ ನೂಲ್ಕಿ, ಶ್ರೀಶೈಲಪ್ಪ ಬಂಡಿಹಾಳ, ದಾವುದಲಿ ಕುದರಿ, ವಿಜಯಲಕ್ಷ್ಮಿ ಚಲವಾದಿ, ಬಸೀರಾಬಾನು ನದಾಫ, ಅಕ್ಕಮ್ಮ ಮಣ್ಣೋಡ್ಡರ, ವಿಶಾಲಾಕ್ಷೀ ಹೊಸಮನಿ, ಸುಮಿತ್ರಾ ಕಮಲಾಪೂರ, ಮಂಜುಳಾ ಹುರಳಿ, ಮಲ್ಲಿಕಸಾಬ ರೋಣದ, ಈರಪ್ಪ ಜೋಗಿ, ಫಕೀರಪ್ಪ ಬಂಬ್ಲಾಪುರ ಸೆರರಿದಂತೆ ಪೌರ ಕಾರ್ಮಿಕರು ಹಾಗೂ ಪ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಕಾರ್ಯದರ್ಶಿ ಆರೀಫಬೇಗ ಮಿರ್ಜಾ ನಿರೂಪಿಸಿದರು. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸದಸ್ಯ ಎ.ಎಸ್. ಮೇಣಸಗಿ ವಂದಿಸಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ