ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಷ್ಠ – ಶ್ರೀ ರಂಭಾಪುರಿ ಜಗದ್ಗುರುಗಳು

ಕ್ರಾಂತ ವಾಣಿ ವಾರ್ತೆ

ವರದಿ : ನಿಂಗಪ್ಪ ಎನ್. ಚಲವಾದಿ/ಸಿಕಂದರ ಎಂ. ಆರಿ

ಗದಗ/ನರೇಗಲ್ಲ : ಮಾನವ ಜೀವನ ಅಮೂಲ್ಯ. ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ. ತುಳಿದು ಬದುಕುವುದಕ್ಕಿಂತ ತಿಳಿದು
ಬದುಕುವುದು ಮುಖ್ಯ. ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ. ತಿಳಿದು ಬದುಕುವವರು ಅಳಿದ ಮೇಲೂ
ಉಳಿಯುತ್ತಾರೆ. ಆ ಪರಮ ಜ್ಞಾನವನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಕಾಣಬಹುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಮೂರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ
ಆಶೀರ್ವಚನ ನೀಡಿದರು.

ಮನುಷ್ಯನಲ್ಲಿರುವ ಅಸುರೀ ಗುಣಗಳು ನಾಶವಾಗಿ ದೈವೀ ಗುಣಗಳು ಬಲಗೊಳ್ಳಬೇಕಾಗಿದೆ. ಯಾವಾಗಲೂ ನಾಶವಾಗದೇ ಇರುವುದು ಧರ್ಮ. ಇದನ್ನು ನಾಶಪಡಿಸುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇಲ್ಲ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೆ ನಮ್ಮೆಲ್ಲರ ಗುರಿಯಾಗಬೇಕು. ಹೆತ್ತ ತಾಯಿ ಹೊತ್ತ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಧರ್ಮ ಮುಖ್ಯವೆಂಬುದನ್ನು ಮರೆಯಬಾರದು. ಸಂವೇದನಾಶೀಲ ಜೀವನಕ್ಕೆ ಆದರ್ಶ ಚಿಂತನಗಳ ಅವಶ್ಯಕತೆಯಿದೆ. ವೀರಶೈವ ಧರ್ಮದ ಸಂಸ್ಕಾರಗಳು ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಕಾರಣವಾಗಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆ ಮುಖ್ಯವೆಂದು ಸಿದ್ಧಾಂತ ಶಿಖಾಮಣಿ  ಧರ್ಮ ಗ್ರಂಥದಲ್ಲಿ ನಿರೂಪಿಸಿದೆ. ನವರಾತ್ರಿಯ ೩ನೇ ದಿನ ಚಂದ್ರಘಂಟಾ ಹೆಸರಿನಲ್ಲಿ ದೇವಿಯ ಪೂಜಾರಾಧನೆ ನಡೆಯುತ್ತದೆ. ಆಹ್ಲಾದಕತೆ ಮಮತೆ ಕ್ಷಮಾಶೀಲತೆ ವಾತ್ಸಲ್ಯ ಈ ದೇವಿಯ ಆರಾಧನೆಯಿಂದ ಪ್ರಾಪ್ತವಾಗಿ ಸತ್ಕಾಯ ಮಾಡಲು ಧೈರ್ಯ ಮತ್ತು ನಿರ್ಭಯತೆ ಉಂಟಾಗುವುದೆಂದರು.

ರಾಜ್ಯ ಗೃಹ ಸಚಿವರಾದ ಡಾ|| ಜಿ.ಪರಮೇಶ್ವರ್ ಅವರು “ಗುರು” ಹೆಸರಿನ ಇಂಗ್ಲೀಷ್ ಕೃತಿಯನ್ನು ಬಿಡುಗಡೆ
ಮಾಡಿ ಮಾತನಾಡಿ, ಮನುಷ್ಯನ ಆದರ್ಶ ಜೀವನ ಉಜ್ವಲಗೊಳ್ಳಲು ಅರಿವು ಆಚಾರ ಬೇಕು. ಧರ್ಮದಲ್ಲಿರುವ ಧಾರ್ಮಿಕ
ಮತ್ತು ಸಾಮಾಜಿಕ ಚಿಂತನೆಗಳು ಜೀವನದ ವಿಕಾಸಕ್ಕೆ ಮುಖ್ಯವಾಗಿವೆ. ಅರಿವು ಪಡೆಯಲು ಗುರುವಿನ ಅಮೂಲ್ಯ
ಮಾರ್ಗದರ್ಶನ ಬೇಕಾಗಿದೆ. ಗುರು ಇಂಗ್ಲೀಷ ಕೃತಿಯಲ್ಲಿ ಸಮಾಜದಲ್ಲಿ ಗುರುವಿನ ಪಾತ್ರ ಎಷ್ಟು ಮಹತ್ವ ಇದೆ
ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಅತ್ಯಂತ ಸಂತೋಷದಿಂದ ಶ್ರೀ ರಂಭಾಪುರಿ ಜಗದ್ಗುರುಗಳು ದಸರಾ ಧರ್ಮ
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೇನೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮಾಚರಣೆ ಬಹು ಮುಖ್ಯವಾಗಿದೆ. ಈ
ದಸರಾ ಸಮಾರಂಭಕ್ಕೆ ಗ್ರಾಮದ ಜನತೆ ಜಾತ್ಯಾತೀತವಾಗಿ ಸ್ವೀಕರಿಸಿದ್ದು ಹಮ್ಮಿಯ ಸಂಗತಿ ಎಂದರು.

ರಾಜ್ಯದ ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಮಾತನಾಡಿ, ಶ್ರೀ
ರಂಭಾಪುರಿ ಪೀಠದ ಜಗದ್ಗುರುಗಳು ನಿರಂತರ ಧರ್ಮ ಪ್ರಸಾರ ಮಾಡುತ್ತ ಬಂದಿದ್ದಾರೆ. ಮಾನವ ಧರ್ಮಕ್ಕೆ
ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಘೋಷಣೆ ಮಾಡಿ ಭಾವೈಕ್ಯತೆ-ಸಾಮರಸ್ಯ ಉಂಟು ಮಾಡಲು ಶ್ರಮಿಸಿದ್ದನ್ನು ಮರೆಯಲಾಗದು. ಅಬ್ಬಿಗೇರಿ ಗ್ರಾಮದಲ್ಲಿ ಇಂಥ ಅದ್ಭುತ ದಸರಾ ಧರ್ಮ ಸಮ್ಮೇಳನ ಜರುಗುತ್ತಿರುವುದು ತಮ್ಮೆಲ್ಲರ ಧರ್ಮ ನಿಷ್ಠೆ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳವರ ಮೇಲೆ ಇಟ್ಟಿರುವ ಭಕ್ತಿ ಶ್ರದ್ಧೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಎಮ್ಮಿಗನೂರು ಹಂಪಿ ಸಾವಿರದೇವರಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಜ್ಞಾನ
ಸಾಧನೆಯಲ್ಲಿ ಸಿದ್ಧಾಂತ ಶಿಖಾಮಣಿಯ ಹಿರಿಮೆ ಬಗ್ಗೆ ಮಾತನಾಡಿ, ಶಿವಾಗಮಗಳಲ್ಲಿರುವ ಆದರ್ಶ ಮೌಲ್ಯಗಳನ್ನು ಈ
ಅಮೂಲ್ಯ ಕೃತಿಯಲ್ಲಿ ಅರಿಯಬಹುದು. ಬದುಕಿನ ಉಜ್ವಲತೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ
ಚಿಂತನಗಳು ದಿಕ್ಸೂಚಿಯಾಗಿವೆ ಎಂದರು.

ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿ, ಗುರು ಇಂಗ್ಲೀಷ ಕೃತಿ ಕಥಾ ರೂಪದಲ್ಲಿದ್ದು ಶಿಕ್ಷಾ ಗುರು ದೀಕ್ಷಾ ಗುರು ಮೋಕ್ಷ ಗುರುವಿನ ಬಗ್ಗೆ ವಿವರಿಸಿದ್ದು ಪ್ರಭುಲಿಂಗ ಶಾಸ್ತಿçಗಳು ೨೦೦ಕ್ಕೂ ಹೆಚ್ಚು ಕೃತಿಗಳನ್ನು ತಮಿಳು ಇಂಗ್ಲೀಷ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಪ್ರಶಸ್ತಿ: ತೆಲಂಗಾಣ ರಾಜ್ಯ ಮೆಹಬೂಬ ನಗರದ ಹಿರಿಯ ಸಾಹಿತಿ ಪಂ.ಆರ್.ಎಂ.ಪ್ರಭುಲಿಂಗ ಶಾಸ್ತ್ರಿಯವರಿಗೆ ೨೦೨೪ನೇ ಸಾಲಿನ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.

ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ಬೀರೂರು ರುದ್ರಮುನಿ ಶಿವಾಚಾರ್ಯರು ಉಪಸ್ಥಿತರಿದ್ದರು. ಶಾಸಕ ಜಿ.ಎಸ್.ಪಾಟೀಲರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಾಸಕ ಎನ್.ಎಚ್.ಕೋನರೆಡ್ಡಿ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಸಚಿವ ಬಿ.ಆರ್.ಯಾವಗಲ್, ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಭಾಗವಹಿಸಿದ್ದರು.

ಗುರುರಕ್ಷೆ: ನಾಗಠಾಣ ಸಗರ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಬೆಳ್ಳಾವಿ ಕಾರದಮಠದ ಕಾರದ
ವೀರಬಸವ ಸ್ವಾಮಿಗಳು, ಅಬ್ಬಿಗೇರಿ ಅರಳೆಲೆಮಠದ ವಿಜಯಮಹಾಂತ ಶಿವಾಚಾರ್ಯ ಸ್ವಾಮಿಗಳು, ಯಲಬುರ್ಗ
ದರಮುರಡಿಮಠದ ಬಸವಲಿಂಗೇಶ್ವರ ಸ್ವಾಮಿಗಳು, ಅಬ್ಬಿಗೇರಿಯ ಫಾಲಾಕ್ಷಯ್ಯ ಶಾಸ್ತ್ರೀ ಅರಳೆಲೆಮಠ, ಶಂಭುಲಿಂಗ
ಶಾಸ್ತಿç ಕವಿಗಳು ಮಾಳಶೆಟ್ಟಿ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ ಸುರೇಶ ಅವರಡ್ಡಿ, ನಾಟಿವೈದ್ಯ ಭೈಲಪ್ಪ ತಳವಾರ,
ಶಾಂತವ್ವ ಬಸಪ್ಪ ಹನಮನಾಳ, ಸಂಗಮ್ಮ ಮ.ಹಿರೇಮಠ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ
ಆಶೀರ್ವದಿಸಿದರು.
ಅಬ್ಬಿಗೇರಿಯ ಉಪನ್ಯಾಸಕ ಬಸವರಾಜ ಪಲ್ಲೇದ ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯರು
ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಮಹಿಳಾ ರುದ್ರ ಬಳಗ ಗದಗ
ಇವರಿಂದ ಸಂಗೀತ ಮತ್ತು ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆಯಿತು.
ನಜರ ಸಮರ್ಪಣೆ: ಸಮಾರಂಭದ ನಂತರ ಶ್ರೀ ಪೀಠದ ಸಿಬ್ಬಂದಿ ಹಾಗೂ ಭಕ್ತರಿಂದ ಆಕರ್ಷಕ ನಜರ ಸಮರ್ಪಣೆ
ಜರುಗಿತು.
ಅನ್ನ ದಾಸೋಹ: ಲಕ್ಷ್ಮೇಶ್ವರದ ಆನಂದಸ್ವಾಮಿ ಜಿ.ಗಡ್ಡದೇವರಮಠ ಹಾಗೂ ಪರಿವಾರದವರಿಂದ ಅನ್ನ ದಾಸೋಹದ ಸೇವೆ ಜರುಗಿತು.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ