ಬದುಕಿನ ಉನ್ನತಿಗೆ ಸಂಸ್ಕಾರ ಸಂಸ್ಕೃತಿ ಅಡಿಪಾಯ – ಶ್ರೀ ರಂಭಾಪುರಿ ಜಗದ್ಗುರುಗಳು

ಕ್ರಾಂತಿ ವಾಣಿ ವಾರ್ತೆ

ವರದಿ : ನಿಂಗಪ್ಪ ಎನ್. ಚಲವಾದಿ / ಸಿಕಂದರ ಎಂ. ಆರಿ

ಗದಗ/ ನರೇಗಲ್ಲ : ಧರ್ಮದ ಚಿಂತನೆಗಳು ಭಾರತೀಯರ ಬದುಕಿಗೆ ಸಜ್ಜನಿಕೆಯ ಜೀವ ತುಂಬಿವೆ. ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆಯುವ ಗುರಿ ನಮ್ಮದಾಗಬೇಕು. ಮನುಷ್ಯ ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಬಲಿ ಕೊಡಬಾರದು. ಸಂಸ್ಕಾರಯುಕ್ತ ಸಂಸ್ಕೃತಿಯಿಂದ ಬದುಕಿನ ಉನ್ನತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಆರನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ನದಿಯ ನೀರನ್ನು ಎಷ್ಟು ತುಂಬಿದರೂ ಹೇಗೆ ಬಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಅದು ಖಾಲಿಯಾಗುವುದಿಲ್ಲ. ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ನಮ್ಮ ಗುರಿಯಾಗಬೇಕು. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಸುಂದರ ಶುದ್ಧಗೊಳಿಸುವುದೇ ಧರ್ಮದ ಗುರಿಯಾಗಿದೆ. ವೀರಶೈವ ಧರ್ಮ ಸಂವಿಧಾನದಲ್ಲಿ ಪುರುಷರಷ್ಟೇ ಮಹಿಳೆಯರಿಗೆ ಧರ್ಮಾಚರಣೆಯ ಸಮಾನ ಹಕ್ಕನ್ನು ಬಹಳ ಪ್ರಾಚೀನ ಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ವೀರಶೈವ ಧರ್ಮ ಪೀಠಗಳು ಮಹಿಳೆಯರಿಗೆ ಹಸಿರು ಬಳೆ, ಕುಂಕುಮ, ಕರಿಮಣಿ, ಕಾಲುಂಗುರ ಮುತ್ತು ಹಾಗೂ ಕೊರಳಿನಲ್ಲಿ ಮಾಂಗಲ್ಯ ಕೊಟ್ಟು ಕರುಣಿಸಿದ್ದಾರೆ. ಸಮೃದ್ಧಿ ತ್ಯಾಗ ಔದಾರ್ಯ ಸಮಾನತೆ ಮತ್ತು ಪರಿಪಕ್ವತೆ ಉಂಟು ಮಾಡುವ ಶಕ್ತಿ ಇವುಗಳಲ್ಲಿ ಅಡಗಿದೆ ಎಂದರು.

ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ “ಕಾವ್ಯ ಕುಸುಮ” ಕೃತಿ ಬಿಡುಗಡೆ ಮಾಡಿ ಜೀವನ ಮೌಲ್ಯಗಳು ಅಂತ್ಯಗೊಂಡರೆ ಅದರೊಂದಿಗೆ ಮಾನವೀಯತೆ ಅಂತ್ಯವಾಗುತ್ತದೆ. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು. ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳನ್ನು ಕುರಿತು ಬರೆದ ಕಾವ್ಯ ಕುಸುಮ ಕೃತಿಯಲ್ಲಿ ಭಕ್ತ ಸಮುದಾಯದ ಶ್ರೇಯಸ್ಸಿಗೆ ಅವರು ನೀಡಿದ ಜೀವನಾದರ್ಶಗಳನ್ನು ಕಾಣಬಹುದು. ಶ್ರೀ ರಂಭಾಪುರಿ ಪೀಠದ ಈ ದಸರಾ ಮಹೋತ್ಸವ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸ್ಫೂರ್ತಿಯನ್ನು ಉಂಟು ಮಾಡುತ್ತದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ವಿಚಾರ ಧಾರೆಗಳು ಸಕಲ ಭಕ್ತರಿಗೆ ಆಶಾಕಿರಣವಾಗಿವೆ. ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವ ದಿಶೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

“ಧಾರ್ಮಿಕತೆಯಲ್ಲಿ ಮಹಿಳೆಯ ಪಾತ್ರ” ವಿಷಯದಲ್ಲಿ ತುಮಕೂರಿನ ಡಾ.ಮೀನಾಕ್ಷಿ ಖಂಡಿಮಠ ಮಾತನಾಡಿ ಹೆಣ್ಣು ಸಂಸಾರದ ಕಣ್ಣು. ಮಹಿಳೆಯರಲ್ಲಿ ಇರುವ ಧಾರ್ಮಿಕ ಶ್ರದ್ಧೆ ಪುರುಷರಲ್ಲಿ ಕಾಣುವುದು ಅತಿ ವಿರಳ. ಮಹಿಳೆ ತಾಯಿಯಾಗಿ ಸಹೋದರಿಯಾಗಿ ಹೆಂಡತಿಯಾಗಿ ಪ್ರತಿ ಹಂತದಲ್ಲಿ ಕುಟುಂಬದ ಶ್ರೇಯಸ್ಸಿಗೆ ಶ್ರಮಿಸುತ್ತಾರೆ. ಭಾರತೀಯ ಉತ್ಕೃಷ್ಠ ಧಾರ್ಮಿಕ ಸಂಪ್ರದಾಯ ಆಚರಣೆಗಳನ್ನು ಪರಿಪಾಲಿಸಿ ಇಡೀ ಕುಟುಂಬದವರಿಗೆಲ್ಲ ಸಂಸ್ಕೃತಿಯನ್ನು ಕಲಿಸುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರಗಳು ಹೆಚ್ಚುತ್ತಿರುವುದು ಕಳವಳಕಾರಿಯಾದ ವಿಚಾರವಾಗಿದೆ. ಕಿರಿ ವಯಸ್ಸಿನಲ್ಲಿ ಕೊಟ್ಟ ಸಂಸ್ಕಾರಗಳು ಕೊನೆಯತನಕ ಕಾಪಾಡಿಕೊಂಡು ಬರುತ್ತವೆ ಎಂದರು.

ಶ್ರೀನಿವಾಸ ಸರಡಗಿ ರೇವಣಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿ ವೀರಶೈವ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಒದಗಿಸಿ ಕೊಟ್ಟ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಅರಿವಿನ ದಾರಿಯಲ್ಲಿ ನಡೆದು ಆದರ್ಶ ಬದುಕನ್ನು ಕಟ್ಟಿಕೊಳ್ಳಬೇಕೆಂದರು.

ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಇವರಿಗೆ “ವೀರಶೈವ ಸಿರಿ” ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಜಿ.ಎಸ್.ಪಾಟೀಲರು ಮಾತನಾಡಿ,ತಮಗೆ ದೊರೆತ ಪ್ರಶಸ್ತಿ ತಮ್ಮನ್ನು ಇನ್ನೂ ಹೆಚ್ಚು ಹೆಚ್ಚು ಸೇವೆ ಮಾಡಲು ಪ್ರೇರೇಪಿಸಿದೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ವಿ.ಪ.ಸದಸ್ಯ ಮಹಾಂತೇಶ ಕವಟಗಿಮಠ, ಬಸನಗೌಡ ಪಾಟೀಲ, ಈ.ಎಸ್.ಪಾಟೀಲ, ಸಚಿಜೀವ ನೀರಲಗಿ, ಲಕ್ಷ್ಮೇಶ್ವರದ ಆನಂದಸ್ವಾಮಿ ಗಡ್ಡದೇವರಮಠ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಗುರುರಕ್ಷೆ: ಗುರುಲಿಂಗ ಶಿವಾಚಾರ್ಯರು ಗುಂಡಕನಾಳ, ಕೈಲಾಸಲಿಂಗ ಶಿವಾಚಾರ್ಯರು ಹಿರೇಮಠ ಪುರ್ತಗೇರಿ, ಅಭಿನವ ಪಂಚಾಕ್ಷರಿ ಶಿವಾಚಾರ್ಯರು ಅಡ್ನೂರು-ರಾಜೂರು, ಮರುಳಾರಾಧ್ಯ ಶಿವಾಚಾರ್ಯರು ಸಂಸ್ಥಾನ ಹಿರೇಮಠ, ಅಳವಂಡಿ, ಸಿದ್ಧಲಿಂಗ ಶಿವಾಚಾರ್ಯರು ಪಂಚಗೃಹ ಹಿರೇಮಠ ನರಗುಂದ, ಅಯ್ಯಪ್ಪಯ್ಯ ಹುಡಾ ರಾಯಚೂರು, ಎಮ್.ಎ.ಹಿರೇವಡೆಯರ್, ಡಾ.ಪಾರ್ವತಿಬಾಯಿ ಚವಡಿ, ಮಲ್ಲಿಕಾರ್ಜುನ ಕುಂಬಾರ, ರವಿಕುಮಾರ ಪಟ್ಟಣಶೆಟ್ಟರ, ಮಂಜುನಾಥ ಚನ್ನಪ್ಪನವರ, ಮಲ್ಲಿಕಾರ್ಜುನ ಬೆಲ್ಲದ, ನಾಗಪ್ಪ ಮಳಗಲಿ, ಡಾ.ಎಸ್.ವಿ.ವಾಲಿ, ಎ.ಎಮ್.ಕೊಟ್ರೇಶ್ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಹುಬ್ಬಳ್ಳಿಯ ಮದ್ವೀರಶೈವ ಸ.ಸಂ. ಹುಬ್ಬಳ್ಳಿ ತಾಲೂಕ ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ವೀರೇಶ ಕಿತ್ತೂರ ಮತ್ತು ರಾಜಗುರು ಡಾ. ಗುರುಸ್ವಾಮಿ ಕಲಿಕೇರಿ ಗದಗ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ಹಾಗೂ ಗದಗಿನ ಶಾರದಾ ಶಿವಾನಂದಯ್ಯ ಹಿರೇಮಠ ಇವರಿಂದ ನಿರೂಪಣೆ ನಡೆಯಿತು.
ನಜರ್ ಸಮರ್ಪಣೆ: ಸಮಾರಂಭದ ನಂತರ ಶ್ರೀ ಪೀಠದ ಸಿಬ್ಬಂದಿ ಹಾಗೂ ಪೀಠಾಭಿಮಾನಿಗಳು, ಆನೆ ಗಜಲಕ್ಷ್ಮೀ‌ಹಾಗೂ ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ಸಲ್ಲಿಸಿದ ನಜರ್ ಸಮರ್ಪಣೆ ಆಕರ್ಷಕವಾಗಿತ್ತು.

ಅನ್ನ ದಾಸೋಹ: ಅಬ್ಬಿಗೇರಿ ಗ್ರಾಮ ಪಂಚಾಯತ ಸದಸ್ಯ ಸುರೇಶ ಸಂಗಪ್ಪ ನಾಯ್ಕರ ಮತ್ತು ಸಹೋದರರಿಂದ ಅನ್ನ ದಾಸೋಹದ ಸೇವೆ ಜರುಗಿತು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ