ಕ್ರಾಂತಿ ವಾಣಿ ವಾರ್ತೆ
ವರದಿ : ನಿಂಗಪ್ಪ ಎನ್. ಚಲವಾದಿ/ ಸಿಕಂದರ ಎಂ. ಆರಿ
ಮಾನವ ಧರ್ಮ ಮಂಟಪ-ಅಬ್ಬಿಗೇರಿ
ಗದಗ/ನರೇಗಲ್ಲ : ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದಲ್ಲಿ ಮಾನವ ಜೀವನ ವ್ಯರ್ಥವಾಗಿ ಹೋಗುತ್ತದೆ. ಅಂತರಂಗ ಬಹಿರಂಗ ಶುದ್ಧಿಗೆ ವೀರಶೈವ ಧರ್ಮ ಆದ್ಯತೆಯನ್ನು ಕೊಟ್ಟಿದೆ. ತಾನು ಎಲ್ಲರಿಗಾಗಿ ಅನ್ನುವುದು ನಿಜವಾದ ಧರ್ಮ. ಎಲ್ಲರೂ ತನಗಾಗಿ ಅನ್ನುವುದು ಅಧರ್ಮವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಏಳನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರ ಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ದೇಶ ಮತ್ತು ಧರ್ಮ ಮಾನವನ ಎರಡು ಕಣ್ಣು ಇದ್ದ ಹಾಗೆ. ಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಜಾತಿ ಜನಾಂಗಳ ಗಡಿ ಮೀರಿ ಮಾನವೀಯ ಉದಾತ್ತ ಮೌಲ್ಯಗಳೊಂದಿಗೆ ಬಾಳಬೇಕೆಂಬುದನ್ನು ಎಲ್ಲರೂ ಅರಿಯಬೇಕು. ಬಿತ್ತಿದ ಬೀಜಕ್ಕೆ ನೀರು ಗೊಬ್ಬರ ಎಷ್ಟು ಮುಖ್ಯವೋ ಅಷ್ಟೇ ನೀತಿಗೆ ಧರ್ಮವೂ ಅವಶ್ಯಕವಾಗಿದೆ. ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಸತ್ಯ ಮತ್ತು ಪ್ರಾಮಾಣಿಕತೆ ಬೇಕು. ಮನುಷ್ಯನ ಶಾಂತಿ ನೆಮ್ಮದಿಗೆ ತತ್ವ ಸಿದ್ಧಾಂತಗಳು ಮೂಲ ನೆಲೆಯಾಗಿವೆ. ಕಾಯಕ ಮತ್ತು ದಾಸೋಹದ ಮೂಲಕ ಸಾಮಾಜಿಕ ಸತ್ಕಾçಂತಿ ಎಸಗಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಿವಾಗಮಗಳಲ್ಲಿ ವೀರಶೈವ ಧರ್ಮದ ಮೂಲ ಬೇರುಗಳನ್ನು ಕಾಣಬಹುದು. ವೀರಶೈವ ಧರ್ಮ ವೃಕ್ಷದ ಬೇರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಾದರೆ ಶಿವಶರಣರು ಆ ವೃಕ್ಷದ ಹೂ ಹಣ್ಣು ಇದ್ದಂತೆ. ಧರ್ಮದ ದೋಣಿಗೆ ರಂಧ್ರ ಕೊರೆಯುವ ಕೆಲಸವನ್ನು ಯಾರೂ ಮಾಡಬಾರದು. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯವನ್ನು ಅರಿತು ಬಾಳಬೇಕಾಗುತ್ತದೆ. ನವರಾತ್ರಿಯ ಏಳನೇ ದಿನ ಕಾಳರಾತ್ರಿ ಹೆಸರಿನಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಭೂತ ಪ್ರೇತಾತ್ಮ ಮತ್ತು ಋಣಾತ್ಮಕ ಶಕ್ತಿಯನ್ನು ನಾಶ ಮಾಡುವ ಅದ್ಭುತ ಶಕ್ತಿಯಿದೆ. ಈ ದೇವಿ ಆರಾಧನೆಯಿಂದ ಆಪತ್ತು ಸಂಕಟಗಳು ದೂರವಾಗಿ ಜ್ಞಾನ ಶಕ್ತಿ ಮತ್ತು ಸಂಪತ್ತು ಕರುಣಿಸುತ್ತಾಳೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಜನರ ಮನೆ ಮನಗಳಲ್ಲಿ ಅಡಗಿರುವ ದುಷ್ಟ ದುರ್ಗುಣಗಳನ್ನು ನಾಶ ಮಾಡಿ ಶಿಷ್ಟ ಸಂಸ್ಕೃತಿ ಬೆಳೆಸುವುದೇ ಗುರು ಪೀಠಗಳ ಧ್ಯೇಯವಾಗಿದೆ. ಸಮರ ಜೀವನವನ್ನು ಅಮರ ಜೀವನದೆಡೆಗೆ ಕರೆದೊಯ್ಯುವುದೇ ಗುರು ಪೀಠಗಳ ಧ್ಯೇಯವಾಗಿದೆ. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸದಾ ಶ್ರಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೆಂದರು.
ಉಪನ್ಯಾಸ: ಸಂಸ್ಕೃತಿ ಚಿಂತಕ ಮೈಸೂರಿನ ಎ.ಆರ್.ರಘುರಾಮ್ ಮಾತನಾಡಿ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ-ರಾಷ್ಟ್ರಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಮಹತ್ಕಾರ್ಯವಾಗಬೇಕು. ಯುವ ಜನಾಂಗ ಧರ್ಮದ ದಾರಿಯಲ್ಲಿ ನಡೆದರೆ ಈ ದೇಶದ ಅಮೂಲ್ಯ ಸಂಪತ್ತು ಅವರಾಗುತ್ತಾರೆ. ಯುವ ಶಕ್ತಿ ದೇಶದ ಶಕ್ತಿ ಅಷ್ಟೇ ಅಲ್ಲ ಆಸ್ತಿಯಾಗಿದ್ದಾರೆ. ಇಂಥ ಸಮಾರಂಭಗಳ ಮೂಲಕ ಯುವ ಜನಾಂಗವನ್ನು ಸನ್ಮಾರ್ಗದಲ್ಲಿ ತರಲು ಸಾಧ್ಯವಾಗುವುದೆಂದರು.
ಮೈಸೂರು ಅರಮನೆ ಜಪದಕಟ್ಟೆಮಠದ ಡಾ||ಮುಮ್ಮುಡಿ ಚಂದ್ರಶೇಖರ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ ಹುಟ್ಟು ಎಷ್ಟು ಸಹಜವೋ ಅಷ್ಟೇ ಹುಟ್ಟಿದ ಮನುಷ್ಯನಿಗೆ ಮರಣ ನಿಶ್ಚಿತ. ಈ ಹುಟ್ಟು ಸಾವುಗಳ ಮಧ್ಯದ ಬದುಕು ಸಮೃದ್ಧಿಗೊಳಿಸಿಕೊಳ್ಳುವುದು ಅವರವರ ಜವಾಬ್ದಾರಿಯಾಗಿದೆ. ಶ್ರೀ ರಂಭಾಪುರಿ ಜಗದ್ಗು ರುಗಳ ದಸರಾ ಧರ್ಮ ಯಜ್ಞ ಬಾಳಿನ ಅಂಧಕಾರ ಕಳೆಯಲು ದಿಕ್ಸೂಚಿಯಾಗಿದೆ. ಗ್ರಾಮ ಚಿಕ್ಕದಾದರೂ ಬಹು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರ ಸೌಭಾಗ್ಯವೆಂದರು.
ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿದರು. ಲಿಂಗಸುಗೂರು ಅಮರೇಶ್ವರಮಠದ ಗಜದಂಡ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ ಅಬ್ಬಿಗೇರಿಯಲ್ಲಿ ಜರುಗಿದ ದಸರಾ ಧರ್ಮ ಸಮ್ಮೇಳನ ನಮ್ಮೆಲ್ಲರ ಬಾಳಿಗೆ ಬೆಳಕು ತೋರಿದೆ ಎಂದರು.
ಪ್ರಶಸ್ತಿ ಪ್ರದಾನ: ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷರಾದ-ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳಿಗೆ “ಶಿವಾಚಾರ್ಯ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು. ಪ್ರಶಸ್ತಿ ಪುರಸ್ಕೃತರಾದ ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಮ್ಮ ಜೀವನ ಇತಿಹಾಸದಲ್ಲಿ ಇಂದಿನ ದಿನ ಅತ್ಯಂತ ಪವಿತ್ರವಾದ ದಿನ. ಜೀವನ ಪರ್ಯಂತರ ಶಿವಾಚಾರ್ಯ ಸಂಸ್ಕೃತಿ-ವೀರಶೈವ ಧರ್ಮದ ಆದರ್ಶ ಮೌಲ್ಯಗಳ ಸಂರಕ್ಷಣೆಗಾಗಿ ಸದಾ ಶ್ರಮಿಸುತ್ತೇವೆ ಎಂದರು.
ವಿ.ಪ.ಸದಸ್ಯ ಸಿ.ಟಿ.ರವಿ ಮಾತನಾಡಿ ಧರ್ಮ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆ. ಧರ್ಮ ಧರ್ಮಗಳಲ್ಲಿ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸುಮಧುರ ಬಾಂಧವ್ಯ ಬೆಳೆದು ಬಂದಾಗ ಸಮಾಜದಲ್ಲಿ ಶಾಂತಿ ನೆಲೆಗೊಳ್ಳುವುದು. ಈ ದಿಶೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರಮಿಸಿ ಮಾರ್ಗದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಜಗದೀಶ ಗುಡಗುಂಟಿಮಠ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಭಾಗವಹಿಸಿ ಮಾತನಾಡಿದರು. ನರೇಗಲ್ಲಿನ ಬಸವರಾಜ ದಿಂಡೂರ ಮಾತನಾಡಿ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ವಾಣಿ ಸಾರ್ವಕಾಲಿಕವಾಗಿದೆ.
ಗುರುರಕ್ಷೆ: ರಾಜೇಶ್ವರ ಶಿವಾಚಾರ್ಯರು ಮೆಹಕರ, ಬಳ್ಳಾರಿ ಕಲ್ಯಾಣಮಠದ ಕಲ್ಯಾಣ ಸ್ವಾಮಿಗಳು, ತ್ರಿಪೂರಾಂತ-ಬಸವಕಲ್ಯಾಣದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಹುಬ್ಬಳ್ಳಿಯ ಡಾ. ಎನ್.ಎ.ಚರಂತಿಮಠ, ಬಸವರಾಜ ಮಳಗಿ, ಶಂಕರಣ್ಣ ಕೊತಬಾಳ, ರುದ್ರಗೌಡ್ರು ಕುರುಡಗಿ, ವೀರಮ್ಮ ಹಿರೇಮಠ, ರೇಣುಕಪ್ರಸಾದಸ್ವಾಮಿ ಹಿರೇಮಠ, ಗದಗಿನ ಮಹದೇವಗೌಡ ತೆಲೆಗೌಡ್ರ, ರಾಜಣ್ಣ ಮಲ್ಲಾಡದ, ಅಜ್ಜಣ್ಣ ಮಲ್ಲಾಡದ, ಮಂಜಣ್ಣ ಬೆಲೇರಿ, ವೆಂಕಟೇಶ್ವರ ದ್ಯಾಸಲಕೇರಿ, ಲಿಂಗಸುಗೂರಿನ ಬಸವರಾಜ ಮತ್ತು ಶಿವಕುಮಾರ ನಂದಿಕೋಲಮಠ, ಮಲ್ಲಣ್ಣ ವಾರದ, ಡಾ|| ಬಸನಗೌಡ್ರು ಪಾಟೀಲ ರಾಯಚೂರು ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಮಾಜಿ ಸಚಿವ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ದಾಸೋಹ ಸಮಿತಿ ಅಧ್ಯಕ್ಷ ಕಳಕಪ್ಪ ಬಂಡಿ ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಕುಮಾರ ಶಿವು ಹಿರೇಮಠ ಹುಬ್ಬಳ್ಳಿ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಸಪ್ರಗತಿ ಹಿರೇಮಠ ಇವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.
ಅನ್ನ ದಾಸೋಹ: ಮಲ್ಲಿಕಾರ್ಜುನ ಸಂಗಪ್ಪ ಹರ್ಲಾಪುರ ಅಬ್ಬಿಗೇರಿ-ಧಾರವಾಡ ಇವರಿಂದ ಅನ್ನ ದಾಸೋಹದ ಸೇವೆ ಜರುಗಿತು.