ನಂಬಿಕೆಯಿಂದ ಸಂಬಂಧಗಳು ಗಟ್ಟಿಯಾಗುತ್ತವೆ : ಶ್ರೀ ರಂಭಾಪುರಿ ಜಗದ್ಗುರುಗಳು

ಕ್ರಾಂತಿ ವಾಣಿ ವಾರ್ತೆ

ವರದಿ : ನಿಂಗಪ್ಪ ಎನ್. ಚಲವಾದಿ/ಸಿಕಂದರ ಎಂ.ಆರಿ

ಮಾನವ ಧರ್ಮ ಮಂಟಪ-ಅಬ್ಬಿಗೇರಿ

ಗದಗ/ನರೇಗಲ್ಲ : ಆಧುನಿಕ ಯುಗದಲ್ಲಿ ಮಾನವೀಯ ಸುಮಧುರ ಸಂಬಂಧಗಳು ಕಡಿಮೆಯಾಗುತ್ತಿವೆ. ಮರಕ್ಕೆ ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ. ಅದೇ ರೀತಿ ಜೀವನದಲ್ಲಿ ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯಲಾರವು. ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಸಂಬಂಧಗಳನನ್ನು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆಯೆಂದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ಶ್ರೀ ಅನ್ನದಾನೇಶ್ವರ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದಲ್ಲಿ ಶಮೀ ಪೂಜೆ ನೆರವೇರಿಸಿ ಸಿಂಹಾಸನಾರೋಹಣ ಮಾಡಿ ಶಾಂತಿ ಸಂದೇಶ ಅನುಗ್ರಹಿಸುತ್ತಿದ್ದರು.

ಆತ್ಮ ಶಕ್ತಿ ಇರುವವನನ್ನು ಯಾವ ದುಷ್ಟ ಶಕ್ತಿಯೂ ನಾಶಗೊಳಿಸಲಾರದು. ಬೆಂಕಿಯಲ್ಲಿ ಚಿನ್ನ ಸುಡುತ್ತಿದ್ದರೂ ಕಪ್ಪಾಗದೇ ಹೊಳೆಯುವಂತೆ ಸಜ್ಜನರು ಎಷ್ಟೇ ತೊಂದರೆಯಾದರೂ ಸ್ವಾಭಿಮಾನದಿಂದ ಬಾಳಿ ಬದುಕುತ್ತಾರೆ. ಕೆಟ್ಟವರು ಒಳ್ಳಯವರನ್ನು ನಿಂದಿಸುವುದು ಆಗಸಕ್ಕೆ ಉಗುಳಿದಂತೆ. ಆ ಉಗುಳು ಉಗಿದವನ ಮುಖದ ಮೇಲೆ ಬೀಳುತ್ತದೆ ಹೊರತು ಒಳ್ಳೆಯವರಿಗೆ ತಾಗುವುದಿಲ್ಲ. ಮನುಷ್ಯ ಜೀವನದಲ್ಲಿ ಎಷ್ಟೇ ಬೆಳೆದು ಬಲಗೊಂಡರೂ ಮೂಲವನ್ನು ಮರೆಯಬಾರದು. ಧರ್ಮ ಪರಂಪರೆ ಸಂಸ್ಕೃತಿ ಮಾನವನ ಅಭ್ಯುದಯಕ್ಕಾಗಿ ಮತ್ತು ಶ್ರೇಯಸ್ಸಿಗಾಗಿ ಇರುತ್ತವೆ ಹೊರತು ಅವನತಿಗಲ್ಲ. ಅರಿತು ಬಾಳುವುದರಿಂದ ಬದುಕು ಬಂಗಾರಗೊಳ್ಳುತ್ತದೆ. ಹಣದಿಂದ ಎಲ್ಲವೂ ಸಿಗುವುದೆಂಬ ಭ್ರಮೆ ಇರಬಾರದು. ಹಣದಿಂದ ಔಷಧಿ ಕೊಳ್ಳಬಹುದು. ಆದರೆ ಆರೋಗ್ಯ ಕೊಳ್ಳಲಾಗದು. ಹಣದಿಂದ ಆಹಾರ ಕೊಳ್ಳಬಹುದು ಆದರೆ ಪಚನಶಕ್ತಿ ಕೊಳ್ಳಲಾಗದು. ಹಣದಿಂದ ಹಾಸಿಗೆ ಕೊಳ್ಳಬಹುದು ಆದರೆ ನಿದ್ದೆ ಕೊಳ್ಳಲಾಗದು. ಹಣದಿಂದ ಪುಸ್ತಕ ಕೊಳ್ಳಬಹುದು ಅದರೆ ಜ್ಞಾನ ಕೊಳ್ಳಲಾಗದು. ಹಣದಿಂದ ಮನೆ ಕೊಳ್ಳಬಹುದು ಆದರೆ ಮನದ ಶಾಂತಿ ಕೊಳ್ಳಲಾಗದು. ಹಣದಿಂದ ವಸ್ತುವನ್ನು ಕೊಳ್ಳಬಹುದು ಅದರೆ ಸತ್ಯವನ್ನು ಎಂದಿಗೂ ಕೊಳ್ಳಲಾಗದು. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕಾಗುತ್ತದೆ. ಮನುಷ್ಯ ಮನುಷ್ಯನನ್ನು ಪ್ರೀತಿ ವಿಶ್ವಾಸ ಕಾಣುವಂತಾದರೆ ಸಮಾಜದಲ್ಲಿ ಯಾವುದೇ ಸಂಘರ್ಷಗಳು ಉಂಟಾಗಲಾರವು. ಸಹನೆ ಸದ್ವಿನಯ ನಿನ್ನದಾದರೆ ಜೀವನದಲ್ಲಿ ಯಶಸ್ಸು ನಿಶ್ಚಿತ. ಅಸುರೀ ಶಕ್ತಿಗಳ ಜೊತೆ ಹೋರಾಡಿ ದೈವೀ ಶಕ್ತಿಗಳಿಗೆ ವಿಜಯವಾದ ದಿನವೇ ವಿಜಯ ದಶಮಿ ಆಚರಣೆಯಾಗಿದೆ. ಸ್ವಧರ್ಮದಲ್ಲಿ ನಿಷ್ಠೆ ಮತ್ತು ಪರಧರ್ಮದಲ್ಲಿ ಸಹಿಷ್ಣುತೆ ಹೊಂದಿ ಸಾಮರಸ್ಯದಿಂದ ಬಾಳಬೇಕೆಂದರು.

ಶಾಸಕ ಜಿ.ಎಸ್.ಪಾಟೀಲ ಕೃತಜ್ಞತಾ ನುಡಿ ನುಡಿದರು. ಸಿದ್ಧರಬೆಟ್ಟ ಶ್ರೀಗಳು ಸಮಾರಂಭದ ಯಶಸ್ಸಿಗಾಗಿ ಕಾರಣರಾದ ಸಮಸ್ತರಿಗೂ ದಾಸೋಹ ದಾನಿಗಳಿಗೂ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಅಬ್ಬಿಗೇರಿ ಹಿರೇಮಠದ-ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳಿಗೆ “ಸಂಸ್ಕೃತಿ ಸಂವರ್ಧನ ರತ್ನ” ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಶಾಸಕರಾದ ಜಿ.ಎಸ್.ಪಾಟೀಲ ಹಾಗೂ ದಸರಾ ಮಹೋತ್ಸವದ ಪದಾಧಿಕಾರಿಗಳು ಶ್ರಿ ರಂಭಾಪುರಿ ಜಗದ್ಗುರುಗಳಿಗೆ ಬಿನ್ನವತ್ತಳೆ, ಕಾಣಿಕೆ, ರೇಷ್ಮೆ ಶಾಲು, ಫಲ, ಪುಷ್ಪ, ತಾಂಬೂಲ ಸಮರ್ಪಿಸಿ ಗೌರವಿಸಿದರು. ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ವಾರ್ತಾ ಕಾರ್ಯದರ್ಶಿ ಡಾ. ಗುರುಮೂರ್ತಿ ಯರಗಂಬಳಿಮಠ, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ, ಡಾ.ಗುರುಪಾದಯ್ಯ ಸಾಲಿಮಠ, ಶಾಂತಾ ಆನಂದ, ವೀರೇಶ ಕಿತ್ತೂರ, ಬಸವರಾಜ ವೀರಾಪುರ, ಬಾಬುಗೌಡ್ರ ಪಾಟೀಲ, ವರ್ಮಪ್ಪ ಹನಮನಾಳ, ಮಂಜುನಾಥ ಅಂಗಡಿ, ಅಂದಪ್ಪ ವೀರಾಪುರ, ಬಸವರಾಜ ಪಲ್ಲೇದ, ಮಲ್ಲಿಕಾರ್ಜುನ ಹರ್ಲಾಪುರ, ಸುರೇಶ ನಾಯಕ, ಸಿವಪ್ಪ ಶಿದ್ನೇಕೊಪ್ಪ, ಗುರಣ್ಣ ಅವರಕಿ, ಸೋಮನಗೌಡ ಕಣವಿ, ಭೀಮಣ್ಣ ಕಂಬಳಿ ಇದ್ದರು. ವೀರಯ್ಯ ಬಿ.ಸೋಮನಕಟ್ಟಿಮಠ ಸರ್ವರನ್ನು ಸ್ವಾಗತಿಸಿದರು.

ಸಮಾರಂಭಕ್ಕೂ ಮುನ್ನ ಗ್ರ‍್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಅನ್ನದಾನೇಶ್ವರ ಪ್ರೌಢ ಶಾಲೆಯ ವರೆಗೆ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ನರೇಗಲ್ಲ, ಎಡೆಯೂರು, ಮಳಲಿ, ಸಂಗೊಳ್ಳಿ, ಹಂಪಸಾಗರ, ಕವಲೇದುರ್ಗ, ಪುರಗಿರಿ, ಹರಗಿನಡೋಣಿ, ದೊಡ್ಡಸಗರ, ತಮ್ಮಡಿಹಳ್ಳಿ, ಜಿಗೇರಿ ಮಠಾಧೀಶರು, ಬನಸವರಾಜ ಶರಣರು ಪಾಲ್ಗೊಂಡಿದ್ದರು.

ಬೆಳಿಗ್ಗೆ ಅಬ್ಬಿಗೇರಿ ಮೂಲ ಮಠದಿಂದ ಹೊಸ ಹಿರೇಮಠಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭಕ್ತರೊಡನೆ ಪೂಜೆಗಾಗಿ ಅಗ್ರೋದಕ ಹೊತ್ತು ನಡೆದರು. ಸಾವಿರಾರು ಭಕ್ತರು ಕುಂಭ ಹೊತ್ತು ಜಗದ್ಗುರುಗಳೊಂದಿಗೆ ಹೆಜ್ಜೆ ಹಾಕಿದ ಘಳಿಗೆ ಅವಿಸ್ಮರಣೀಯ ದೃಶ್ಯವಾಗಿತ್ತೆಂಬುದನ್ನು ಮರೆಯುವಂತಿಲ್ಲ.
ಇಂದಿನ ದಾಸೋಹ ಸೇವೆಯನ್ನು ಶರಣಪ್ಪ ಶಿವಪ್ಪ ಕಿಟಗೇರಿ, ಪ್ರಭು ವಿ.ಬೇವಿನಕಟ್ಟಿ, ಶಕುಂತಲಾ ಬಸಪ್ಪ ನಿಡಗುಂದಿ, ಬಾಬು ವೀರಭದ್ರಪ್ಪ ನಿರಲೋಟ, ಬಸವರಾಜ ಮಲ್ಲಾಪುರ, ಪರಪ್ಪ ಕಳಕಪ್ಪ ಮಾಳಶೆಟ್ಟಿ, ಎನ್.ಬಾಬು ನವರಂಗಿ ಬೆಂಗಳೂರು ಸಲ್ಲಿಸಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ